ಅಧಿಕಾರದ ಗದ್ದುಗೆ ಹಿಡಿಯಲು ಆಡಳಿತಾರೂಢ ಬಿಜೆಪಿ ಆಪರೇಶನ್ ಕಮಲ ತಂತ್ರವನ್ನು ಮುಂದುವರಿಸಿದ್ದು, ಗುಲ್ಬರ್ಗಾ ಜಿಲ್ಲಾ ಪಂಚಾಯಿತಿಯ ಮೂವರು ಜೆಡಿಎಸ್ ಸದಸ್ಯರನ್ನು ಬಿಜೆಪಿ ತನ್ನ ತೆಕ್ಕೆಗೆ ಸೆಳೆದುಕೊಳ್ಳುವಲ್ಲಿ ಯಶಸ್ವಿಯಾಗಿದೆ. ಆ ನಿಟ್ಟಿನಲ್ಲಿ ಬಿಜೆಪಿ ಗುಲ್ಬರ್ಗಾ ಜಿ.ಪಂ. ಅನ್ನು ತನ್ನ ವಶಕ್ಕೆ ತೆಗೆದುಕೊಂಡಿದೆ.
ಗುಲ್ಬರ್ಗಾ ಜಿಲ್ಲಾ ಪಂಚಾಯಿತಿಯ ಜೆಡಿಎಸ್ ಸದಸ್ಯರಾದ ಹರ್ಷ ಗುತ್ತೇದಾರ್, ಜಯಶ್ರೀ ಅಶೋಕ್ ಹಾಗೂ ಮಂಗಳಾ ಬಿಜೆಪಿ ರಾಜ್ಯಾಧ್ಯಕ್ಷ ಕೆ.ಎಸ್.ಈಶ್ವರಪ್ಪ, ಸಚಿವ ರೇವೂ ನಾಯಕ್ ಬೆಳಮಗಿ ಸಮ್ಮುಖದಲ್ಲಿ ಬಿಜೆಪಿಗೆ ಸೇರ್ಪಡೆಗೊಂಡರು. 43 ಸದಸ್ಯ ಬಲದ ಗುಲ್ಬರ್ಗಾ ಜಿಲ್ಲಾ ಪಂಚಾಯಿತಿಯಲ್ಲಿ ಬಿಜೆಪಿ 20, ಕಾಂಗ್ರೆಸ್ 19, ಜೆಡಿಎಸ್ 3 ಹಾಗೂ 1 ಪಕ್ಷೇತರ ಅಭ್ಯರ್ಥಿ ಗೆಲುವು ಸಾಧಿಸಿದ್ದರು.
ಇತ್ತೀಚೆಗಷ್ಟೇ ನಡೆದ ರಾಜ್ಯದ 30 ಜಿಲ್ಲಾ ಪಂಚಾಯಿತಿ ಚುನಾವಣೆಯಲ್ಲಿ ಆಡಳಿತಾರೂಢ ಬಿಜೆಪಿ 12 ಜಿ.ಪಂಗಳಲ್ಲಿ ಗೆಲುವು ಸಾಧಿಸಿತ್ತು. ಕಾಂಗ್ರೆಸ್ 4 ಹಾಗೂ ಜೆಡಿಎಸ್ 4 ಜಿ.ಪಂಗಳನ್ನು ತಮ್ಮ ತೆಕ್ಕೆಗೆ ಹಾಕಿಕೊಂಡಿದ್ದವು. ಆದರೆ ಹತ್ತು ಜಿಲ್ಲಾ ಪಂಚಾಯಿತಿಗಳಲ್ಲಿ ಯಾವ ಪಕ್ಷಕ್ಕೂ ಪೂರ್ಣ ಬಹುಮತ ದೊರೆಯದ ಹಿನ್ನೆಲೆಯಲ್ಲಿ ಅತಂತ್ರ ಸ್ಥಿತಿ ನಿರ್ಮಾಣವಾಗಿತ್ತು.
ಆ ನಿಟ್ಟಿನಲ್ಲಿ ಶತಾಯ ಗತಾಯ ಅಧಿಕಾರದ ಗದ್ದುಗೆ ಹಿಡಿಯಬೇಕೆಂಬ ಹಠ ತೊಟ್ಟಿರುವ ಬಿಜೆಪಿ ಮೊರೆ ಹೋದದ್ದು ಆಪರೇಶನ್ ಕಮಲಕ್ಕೆ. ಅದರ ಆರಂಭಿಕ ಹಂತವಾಗಿಯೇ ಬಳ್ಳಾರಿ ಜಿಲ್ಲಾ ಪಂಚಾಯಿತಿಯಲ್ಲಿ ಆಪರೇಶನ್ ಕಮಲದ ಮೂಲಕ ಕಾಂಗ್ರೆಸ್ ಸದಸ್ಯೆ ನಾಗರತ್ನಮ್ಮ ಅವರನ್ನು ತಮ್ಮತ್ತ ಸೆಳೆದುಕೊಂಡಿದ್ದರು. ನಂತರ ರಾಯಚೂರಿನಲ್ಲಿಯೂ ಕಾಂಗ್ರೆಸ್, ಜೆಡಿಎಸ್ ಸದಸ್ಯರಿಗೆ ಗಾಳ ಹಾಕುವ ಯತ್ನ ನಡೆಸಿತ್ತು. ಇದೀಗ ಗುಲ್ಬರ್ಗಾ ಜಿಲ್ಲಾ ಪಂಚಾಯಿತಿಯ ಮೂವರು ಜೆಡಿಎಸ್ ಸದಸ್ಯರನ್ನು ತನ್ನ ಬಗಲಿಗೆ ಹಾಕಿಕೊಂಡು ಅಧಿಕಾರದ ಗದ್ದುಗೆ ಏರುವ ಹಾದಿಯನ್ನು ಸುಗಮಗೊಳಿಸಿಕೊಂಡಿದೆ.