ಕರುಣಾಕರ ರೆಡ್ಡಿ ಸುಳ್ಳು ಹೇಳೋದು ಯಾಕೆ?: ಉಗ್ರಪ್ಪ ತಿರುಗೇಟು
ಬೆಂಗಳೂರು, ಮಂಗಳವಾರ, 11 ಜನವರಿ 2011( 10:54 IST )
ಬಳ್ಳಾರಿಯ ರೆಡ್ಡಿ ಸಹೋದರರು ಅಕ್ರಮ ಗಣಿಗಾರಿಕೆ ನಡೆಸುತ್ತಿರುವ ಬಗ್ಗೆ ಸಿಇಸಿ ಸುಪ್ರೀಂಕೋರ್ಟ್‌ಗೆ ವರದಿ ಸಲ್ಲಿಸಿದ ಬೆನ್ನಲ್ಲೇ ತಮಗೂ ಓಬಳಾಪುರಂ ಮೈನಿಂಗ್ ಕಂಪನಿಗೂ ಯಾವುದೇ ಸಂಬಂಧ ಇಲ್ಲ ಎಂದು ಕಂದಾಯ ಸಚಿವ ಕರುಣಾಕರ ರೆಡ್ಡಿ ಸ್ಪಷ್ಟನೆ ನೀಡಿದ್ದರು. ಆದರೆ ಕರುಣಾಕರ ರೆಡ್ಡಿ ಓಎಂಸಿಯಲ್ಲಿ ನಿರ್ದೇಶಕರಾಗಿದ್ದ ಬಗ್ಗೆ ಕಾಂಗ್ರೆಸ್ ಸೋಮವಾರ ದಾಖಲೆಯನ್ನು ಬಿಡುಗಡೆ ಮಾಡುವ ಮೂಲಕ ತಿರುಗೇಟು ನೀಡಿದೆ.
ಕೆಪಿಸಿಸಿ ಕಚೇರಿಯಲ್ಲಿ ಪತ್ರಿಕಾಗೋಷ್ಠಿ ನಡೆಸಿದ ಕಾಂಗ್ರೆಸ್ ವಕ್ತಾರ ವಿ.ಎಸ್.ಉಗ್ರಪ್ಪ ಅವರು ಈ ದಾಖಲೆಗಳನ್ನು ಮಾಧ್ಯಮಗಳಿಗೆ ಬಿಡುಗಡೆ ಮಾಡಿದರು.
ತಾವು ಪರಿಶುದ್ಧರು, ಸತ್ಯವಂತರು ಎಂದು ಹೇಳುವ ರೆಡ್ಡಿ ಸಹೋದರರು ನಡೆಸುತ್ತಿರುವ ವ್ಯವಹಾರ ಅಕ್ರಮ ಎಂಬುದು ಲೋಕಾಯುಕ್ತ ಹಾಗೂ ಸಿಇಸಿ ವರದಿಯಿಂದ ಸಾಬೀತಾಗಿದೆ. ಆದರೂ ಬಿಜೆಪಿ ಅವರ ವಿರುದ್ಧ ಯಾವುದೇ ಕ್ರಮ ಕೈಗೊಳ್ಳದೆ ರಕ್ಷಿಸುತ್ತಿದೆ ಎಂದು ಆರೋಪಿಸಿದರು.
ಅಷ್ಟೇ ಅಲ್ಲ ಸೈಕಲ್ ಖರೀದಿ ಹಗರಣ ಕುರಿತಂತೆ ವಿಶೇಷ ಸದನ ಸಮಿತಿ ಸಲ್ಲಿಸಿರುವ ವರದಿಯನ್ನು ವಿಧಾನಪರಿಷತ್ ತಿರಸ್ಕರಿಸಬೇಕು. ಈ ಹಗರಣವನ್ನು ಸಿಬಿಐ ಅಥವಾ ಲೋಕಾಯುಕ್ತರಿಂದ ತನಿಖೆ ನಡೆಸಬೇಕು ಎಂದು ಒತ್ತಾಯಿಸಿದರು.
ಸೈಕಲ್ ಖರೀದಿ ವ್ಯವಹಾರದಲ್ಲಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಮತ್ತು ಅವರ ಕುಟುಂಬ ವರ್ಗದ ಸದಸ್ಯರು ಲಂಚ ಪಡೆದಿದ್ದಾರೆ. ಆದರೆ ಸದನ ಸಮಿತಿ ಸತ್ಯವನ್ನು ಮರೆಮಾಚಿ ಸುಳ್ಳು ವರದಿ ನೀಡಿದ ಎಂದು ದೂರಿದರು.