ಶಾಲೆಗೆ ಚಕ್ಕರ್; ಕ್ರೂರಿ ಶಿಕ್ಷಕನ ಶಿಕ್ಷೆಗೆ ವಿದ್ಯಾರ್ಥಿ ಸಾವು
ಹೊನ್ನಾವರ, ಮಂಗಳವಾರ, 11 ಜನವರಿ 2011( 11:17 IST )
ಎರಡು ದಿನ ಶಾಲೆಗೆ ಚಕ್ಕರ್ ಹೊಡೆದಿದ್ದ ಎಂಬ ಕಾರಣಕ್ಕೆ ವಿದ್ಯಾರ್ಥಿಯೊಬ್ಬನಿಗೆ ಶಿಕ್ಷಕ ನೀಡಿದ ಶಿಕ್ಷೆಗೆ ಆತ ಸಾವನ್ನಪ್ಪಿದ ಅಮಾನವೀಯ ಘಟನೆ ಇಲ್ಲಿನ ಶಾಲೆಯೊಂದರಲ್ಲಿ ಸೋಮವಾರ ನಡೆದಿದೆ.
ಅಫ್ಜಲ್ ಹಮ್ಜಾ ಸಾಬ್ ಪಟೇಲ್ ಎಂಬ 8ನೇ ತರಗತಿ ವಿದ್ಯಾರ್ಥಿ ಎರಡು ದಿನ ಶಾಲೆಗೆ ರಜೆ ಹಾಕಿದ್ದ ಎಂಬ ನೆಪದಲ್ಲಿ ನ್ಯೂ ಇಂಗ್ಲಿಷ್ ಪ್ರೌಢಶಾಲೆಯ ದೈಹಿಕ ಶಿಕ್ಷಕ ಮೈದಾನದಲ್ಲಿ ಓಡುವ ಶಿಕ್ಷೆ ನೀಡಿದ್ದ. ಪಟೇಲ್ ಓಡುತ್ತಿರುವಾಗಲೇ ಕುಸಿದು ಬಿದ್ದು ಸಾವನ್ನಪ್ಪಿದ್ದ.
ವಿದ್ಯಾರ್ಥಿ ಸಾವನ್ನಪ್ಪಿದ ಸುದ್ದಿ ಎಲ್ಲೆಡೆ ಹಬ್ಬುತ್ತಿದ್ದಂತೆಯೇ ಸಾರ್ವಜನಿಕರು ಶಾಲೆ ಆವರಣದಲ್ಲೇ ವಿದ್ಯಾರ್ಥಿಯ ಕಳೇಬರ ಇಟ್ಟು ಪ್ರತಿಭಟನೆ ನಡೆಸಿದರು. ಈ ಸಂದರ್ಭದಲ್ಲಿ ಮುಖ್ಯೋಪಾಧ್ಯಾಯ ಜಿ.ಟಿ.ಹೆಬ್ಬಾರ್, ದೈಹಿಕ ಶಿಕ್ಷಕ ಕೆ.ಡಿ.ನಾಯ್ಕ್ ಅವರನ್ನು ಸಾರ್ವಜನಿಕರು ಹಿಗ್ಗಾಮುಗ್ಗಾ ಥಳಿಸಿ ಗೂಸಾ ನೀಡಿದ್ದಾರೆ.
ಸಿಟ್ಟಿಗೆದ್ದ ಗುಂಪೊಂದು ಶಾಲಾ ಕೊಠಡಿಗೆ ನುಗ್ಗಿ ಕುರ್ಚಿ, ಬೆಂಚ್‌ಗಳನ್ನು ಧ್ವಂಸ ಮಾಡಿದ್ದಾರೆ. ಈ ವೇಳೆ ಪೊಲೀಸರು ಮತ್ತು ಸಾರ್ವಜನಿಕರ ನಡುವೆ ಘರ್ಷಣೆ ನಡೆಯಿತು.
ಮೃತ ವಿದ್ಯಾರ್ಥಿ ಕುಟುಂಬಕ್ಕೆ ಶಾಲಾ ಆಡಳಿತ ಮಂಡಳಿ ಒಂದು ಲಕ್ಷ ರೂಪಾಯಿ ಪರಿಹಾರ ಘೋಷಿಸಿದೆ. ಅಲ್ಲದೇ ಬಿಇಒ ಕಚೇರಿ 28 ಸಾವಿರ ರೂಪಾಯಿ ಚೆಕ್ ನೀಡಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಶಿಕ್ಷಕರಾದ ಕೆ.ಡಿ.ನಾಯ್ಕ್, ಗಣೇಶ ಹೆಬ್ಬಾರ ಅವರನ್ನು ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದಾರೆ.