ಅಕ್ರಮ ಗಣಿ-ರೆಡ್ಡಿ ಬ್ರದರ್ಸ್ ರಾಜೀನಾಮೆ ಪಡೆಯಿರಿ: ಕೊಂಡಯ್ಯ
ಬಳ್ಳಾರಿ, ಮಂಗಳವಾರ, 11 ಜನವರಿ 2011( 16:26 IST )
ಸಿಇಸಿ ವರದಿಯಿಂದ ಅಕ್ರಮ ಗಣಿಗಾರಿಕೆ, ಅದಿರು ಸಾಗಣೆ, ಮಾರಾಟ ಸಾಬೀತಾಗಿದ್ದು, ಜಿಲ್ಲೆಯ ಮೂವರು ಸಚಿವರಿಂದ ರಾಜೀನಾಮೆ ಪಡೆಯಬೇಕು ಎಂದು ವಿಧಾನ ಪರಿಷತ್ ಸದಸ್ಯ ಕೆ.ಸಿ.ಕೊಂಡಯ್ಯ ಆಗ್ರಹಿಸಿದರು.
ಸಿರುಗುಪ್ಪದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಸುಪ್ರೀಂಕೋರ್ಟ್‌ಗೆ ಸಲ್ಲಿಸಿರುವ ಸಿಇಸಿ ವರದಿಯಲ್ಲಿ ಬಳ್ಳಾರಿ ಸಚಿವರ ಅಕ್ರಮ ಗಣಿಗಾರಿಕೆ ಬಯಲಿಗೆ ಬಿದ್ದಿದೆ. 2008ರವರೆಗೂ ಸಚಿವ ಕರುಣಾಕರರೆಡ್ಡಿ ಓಬಳಾಪುರಂ ಕಂಪನಿಯ 18,000 ಷೇರು ಹೊಂದಿದ್ದರು. ನಂತರ ಸಚಿವ ಶ್ರೀರಾಮುಲು ಮತ್ತು ಕರುಣಾಕರರೆಡ್ಡಿ ತಮ್ಮ ಷೇರುಗಳನ್ನು ಸಚಿವ ಜನಾರ್ದನರೆಡ್ಡಿ ಹೆಸರಿಗೆ ವರ್ಗಾಯಿಸಿದ್ದಾರೆ. ಹೀಗಿರುವಾಗ ಓಬಳಾಪುರಂ ಗಣಿ ಕಂಪನಿಗೂ ತಮಗೂ ಸಂಬಂಧವಿಲ್ಲ ಎಂದು ಕರುಣಾಕರರೆಡ್ಡಿ ಹೇಳುವುದರಲ್ಲಿ ಹುರುಳಿಲ್ಲ. ಮೊದಲು ಮುಖ್ಯಮಂತ್ರಿ ಯಡಿಯೂರಪ್ಪ ಈ ಮೂವರು ಸಚಿವರ ರಾಜೀನಾಮೆ ಪಡೆಯಬೇಕು ಎಂದು ಒತ್ತಾಯಿಸಿದರು.
ಬೇಲೇಕೇರಿ ಅದಿರು ನಾಪತ್ತೆ ಪ್ರಕರಣದ ಆರೋಪಿಗಳು ಯಾರು, ಈ ಪ್ರಕರಣದ ಸೂತ್ರಧಾರ ಯಾರು ಎನ್ನುವುದು ಮುಖ್ಯಮಂತ್ರಿಗೆ ಗೊತ್ತಿದೆ. ಆದರೂ ತಪ್ಪಿತಸ್ಥರ ವಿರುದ್ಧ ಏನೂ ಕ್ರಮ ಕೈಗೊಂಡಿಲ್ಲ. ರೆಡ್ಡಿಗಳನ್ನು ಪರೋಕ್ಷವಾಗಿ ರಕ್ಷಿಸುವ ಎಲ್ಲ ಪ್ರಯತ್ನಗಳು ನಡೆಯುತ್ತಿವೆ ಎಂದು ಆರೋಪಿಸಿದರು.
ಸಂಡೂರು ವಲಯದಲ್ಲಿ 42 ಗಣಿ ಗುತ್ತಿಗೆದಾರರಿಂದ ಸಂಗ್ರಹಿಸಿದ 3 ಕೋಟಿ ಟನ್ ಹಫ್ತಾ ರೂಪದ ಅದಿರನ್ನು ಆಂಧ್ರಕ್ಕೆ ರವಾನಿಸಲಾಗಿದೆ. ಅನಧಿಕೃತವಾಗಿ ಆಂಧ್ರ ಮತ್ತು ಅನಂತಪುರ ನಡುವೆ ರಸ್ತೆ ನಿರ್ಮಿಸಿ ಅಕ್ರಮ ಅದಿರು ಸಾಗಿಸಲಾಗಿದೆ ಎಂದು ಆರೋಪಿಸಿದರು.