ಯಡಿಯೂರಪ್ಪ ಹಿಟ್ಲರ್ ಆಡಳಿತ ನಡೆಸ್ತಿದ್ದಾರೆ: ಸಂತೋಷ್ ಲಾಡ್
ರಾಣೇಬೆನ್ನೂರು, ಮಂಗಳವಾರ, 11 ಜನವರಿ 2011( 16:31 IST )
ಬಳ್ಳಾರಿ ಜಿಲ್ಲೆಯಲ್ಲಿ ಪೊಲೀಸರು ಬಿಜೆಪಿ ಕಾರ್ಯಕರ್ತರಂತೆ ಕಾರ್ಯನಿರ್ವಹಿಸುತ್ತಿದ್ದಾರೆ ಎಂದು ಕಲಘಟಗಿ ಶಾಸಕ ಸಂತೋಷ ಲಾಡ್ ಗಂಭೀರವಾಗಿ ಆರೋಪಿಸಿದ್ದಾರೆ.
ಪಟ್ಟಣದಲ್ಲಿ ಸುದ್ದಿಗಾರರ ಜತೆ ಮಾತನಾಡಿದ ಅವರು, ಬಳ್ಳಾರಿ ಜಿಲ್ಲೆಯನ್ನು ತಮ್ಮ ಜಹಗೀರಿನಂತೆ ಭಾವಿಸಿರುವ ರೆಡ್ಡಿ ಸಹೋದರರಿಗೆ ಜಿಲ್ಲೆಯ ಜನತೆ ಈ ಸಲದ ಪಂಚಾಯಿತಿ ಚುನಾವಣೆಯಲ್ಲಿ ತಕ್ಕ ಪಾಠ ಕಲಿಸಿದ್ದಾರೆ ಎಂದರು.
ಬಿಜೆಪಿಗೆ ರಾಜ್ಯದ ಅಭಿವೃದ್ಧಿ ಕುರಿತು ಯಾವುದೇ ನಿರ್ದಿಷ್ಟ ಗುರಿಯಿಲ್ಲ, ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹಿಟ್ಲರ್‌ನಂತೆ ಆಡಳಿತ ನಡೆಸುತ್ತಿದ್ದಾರೆ. ತಮ್ಮದು ಅಭಿವೃದ್ಧಿ ಪರ ಸರಕಾರ ಎಂದು ಪತ್ರಿಕೆಗಳಲ್ಲಿ ಜಾಹೀರಾತಿನ ಮೂಲಕ ಬಡಾಯಿ ಕೊಚ್ಚಿಕೊಳ್ಳುವ ಬಿಜೆಪಿ ಗ್ರಾಮೀಣ ಭಾಗದ ಅಭಿವೃದ್ದಿಗೆ ಜಾರಿಗೆ ತಂದಿರುವ ಸುವರ್ಣ ಗ್ರಾಮ ಯೋಜನೆ ಎಲ್ಲಿಯೂ ಪೂರ್ಣಗೊಂಡಿಲ್ಲ. ಇದೊಂದು ಸುಳ್ಳಿನ ಸರಕಾರವಾಗಿದ್ದು ಪ್ರಗತಿ ಕಾರ್ಯ ಕುಂಠಿತವಾಗಿವೆ ಎಂದು ದೂರಿದರು.
ಕಾರವಾರದ ಬೇಲೆಕೆರಿ ಬಂದರಿನಲ್ಲಿ ನ್ಯಾಯಾಲಯ ವಶಪಡಿಸಿಕೊಂಡಿದ್ದ 5 ಲಕ್ಷ ಟನ್ ಕಬ್ಬಿಣದ ಅದಿರು ನಾಪತ್ತೆಯಾಗಿರುವುದು ನಿಜಕ್ಕೂ ಅಚ್ಚರಿಯ ಸಂಗತಿ. ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಯಲ್ಲಿ 6 ತಿಂಗಳಲ್ಲಿ ಸರಾಸರಿ ತಿಂಗಳಿಗೆ 40 ರೋಗಿಗಳಂತೆ ಇದುವರೆಗೂ ಸುಮಾರು 200 ಜನ ವೈದ್ಯರ ಕೊರತೆಯಿಂದ ಸೂಕ್ತ ಚಿಕಿತ್ಸೆ ಲಭಿಸದೇ ಸಾವನ್ನಪ್ಪಿದ್ದಾರೆ.
ಏಳೆಂಟು ತಿಂಗಳಿಂದ ವಿದ್ಯಾರ್ಥಿಗಳಿಗೆ ಸೈಕಲ್ ವಿತರಿಸಿಲ್ಲ. ಸರಕಾರಕ್ಕೆ ಯಾವುದೇ ವಿಷಯಲ್ಲಿ ಬದ್ಧತೆ ಎಂಬುದಿಲ್ಲ. 60 ವರ್ಷದ ಕಾಂಗ್ರೆಸ್ ಆಡಳಿತದಲ್ಲಿ ನಡೆದಕ್ಕಿಂತ ಹೆಚ್ಚು ಪ್ರಮಾಣದ ಭ್ರಷ್ಟಾಚಾರ ಎರಡೂವರೆ ವರ್ಷದ ಅಲ್ಪಕಾಲದ ಬಿಜೆಪಿ ಆಡಳಿತದಲ್ಲಿ ನಡೆದಿದೆ. ಸಂಸತ್ತಿನಲ್ಲಿ ಸುಗಮವಾಗಿ ಕಲಾಪ ನಡೆಯಲು ಬಿಡದೆ ಸತಾಯಿಸಿದ ಬಿಜೆಪಿ ರಾಜ್ಯದಲ್ಲಿ ಮಾತ್ರ ಪ್ರತಿಪಕ್ಷಗಳು ಸಹಕಾರ ನೀಡಬೇಕೆಂದು ಅಪೇಕ್ಷಿಸುವುದು ಯಾವ ನ್ಯಾಯ ಎಂದು ಪ್ರಶ್ನಿಸಿದರು.