'ಮುಖ್ಯಮಂತ್ರಿಯಾಗಿ ನನ್ನ ಇತಿಮಿತಿಯಲ್ಲಿ ಸುಮ್ಮನೆ ಕುಳಿತಿದ್ದೇನೆ. ನನ್ನ ಕೆಣಕಿದರೆ ಅದೇ ಭಾಷೆಯಲ್ಲೇ ನಾನು ಉತ್ತರ ಕೊಡಬೇಕಾಗುತ್ತದೆ ಹುಶಾರ್. ಅಪ್ಪ-ಮಕ್ಕಳ ಬಣ್ಣ ಬಯಲು ಮಾಡುತ್ತೇನೆ'...ಹೀಗೆ ಕೆಂಡಾಮಂಡಲರಾಗಿ ವಾಗ್ದಾಳಿ ನಡೆಸಿದವರು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ.
ಮಂಗಳವಾರ ಬೆಳಿಗ್ಗೆ ಮೂರನೇ ದಿನದ ವಿಧಾನಮಂಡಲದ ಕಲಾಪ ಆರಂಭಗೊಂಡಾಗಿನಿಂದಲೂ ಆಡಳಿತಾರೂಢ ಮತ್ತು ಪ್ರತಿಪಕ್ಷಗಳ ಸದಸ್ಯರ ನಡುವೆ ಮಾತಿನ ಚಕಮಕಿ ನಡೆಯುತ್ತಿದ್ದರೂ ಕೂಡ ಮುಖ್ಯಮಂತ್ರಿಗಳು ಮೌನಕ್ಕೆ ಶರಣಾಗಿದ್ದರು. ಆದರೆ ಮಧ್ಯಾಹ್ನ 3 ಗಂಟೆ ನಂತರ ಕಲಾಪ ಆರಂಭವಾದಾಗ ಜೆಡಿಎಸ್ ಶಾಸಕಾಂಗ ಪಕ್ಷದ ಮುಖಂಡ ಎಚ್.ಡಿ.ರೇವಣ್ಣ ಆರೋಪಕ್ಕೆ ಮುಖ್ಯಮಂತ್ರಿಗಳು ಸಿಟ್ಟು ನೆತ್ತಿಗೇರಿ ವಾಗ್ದಾಳಿ ನಡೆಸಿದ ಘಟನೆ ನಡೆಯಿತು.
'ಯಡಿಯೂರಪ್ಪನವರು ಸಾಯೋವರೆಗೂ ಎಚ್.ಡಿ.ಕುಮಾರಸ್ವಾಮಿ ಅವರ ಫೋಟೋ ಇಟ್ಟುಕೊಂಡು ಪೂಜೆ ಮಾಡ್ಬೇಕು. ಯಾಕೆಂದರೆ ಅವರಿಂದಾಗಿಯೇ ನೀವು ಅಧಿಕಾರದ ಗದ್ದುಗೆ ಏರಲು ಸಾಧ್ಯವಾಗಿದ್ದು. ಪ್ರಾದೇಶಿಕ ಪಕ್ಷದಿಂದ ಬೆಂಬಲದಿಂದಲೇ ನೀವು ಅಧಿಕಾರಕ್ಕೆ ಬಂದಿದ್ದೀರಿ. ಅಧಿಕಾರಕ್ಕಾಗಿ ನೀವು ನಮ್ಮ ಮನೆ ಬಾಗಿಲಿಗೆ ಬಂದಿದ್ದೀರಿ. ನಾನೇನು ನಿಮ್ಮ ಮನೆ ಬಾಗಿಲ ಮೆಟ್ಟಿಲು ತುಳಿದಿಲ್ಲ' ಎಂದು ರೇವಣ್ಣ ಗಂಭೀರವಾಗಿ ಆರೋಪಿಸಿದ್ದರು.
NRB
ಈ ಮಾತನ್ನು ಕೇಳಿಸಿಕೊಂಡು ಕೆಂಡಾಮಂಡಲರಾದ ಮುಖ್ಯಮಂತ್ರಿಗಳು, ಅಪ್ಪ-ಮಕ್ಕಳಿಗೆ ನಾಚಿಕೆಯಾಗ್ಬೇಕು. ಏಯ್ ಇಲ್ನೋಡು ನಿಮ್ಮ ಅಪ್ಪ-ಮಕ್ಕಳ ಭ್ರಷ್ಟಾಚಾರದ ಕರ್ಮಕಾಂಡದ ದಾಖಲೆ ಇಲ್ಲಿದೆ ಎಂದು ಐದಾರು ಫೈಲ್‌ಗಳನ್ನು ಎತ್ತಿ ತೋರಿಸಿದರು. ನನ್ನ ಕೆಣಕಿದರೆ ಸುಮ್ಮನಿರಲ್ಲ. ಭ್ರಷ್ಟಾಚಾರ ನಡೆಸಿ ಸಾಕಷ್ಟು ಆಸ್ತಿ ಮಾಡಿಕೊಂಡ ನೀವು ನನ್ನ ಮೇಲೆ ವಾಗ್ದಾಳಿ ನಡೆಸುತ್ತೀರಾ. ನಿಮ್ಮ ಜಾತಕ ಬಟಾ ಬಯಲು ಮಾಡುತ್ತೇನೆ. ತಾಕತ್ತಿದ್ದರೆ ಚರ್ಚೆಗೆ ಬನ್ನಿ ಎಂದು ರೇವಣ್ಣಗೆ ಈ ಸಂದರ್ಭದಲ್ಲಿ ಸವಾಲು ಹಾಕಿದರು.
ವಿಧಿ ಇಲ್ಲದೆ ಎಲ್ಲರ ಕೈಕಾಲು ಹಿಡಿದು ಬದುಕುತ್ತಿರುವ ನೀವು ನನ್ನ ಮೇಲೆ ಗೂಬೆ ಕೂರಿಸುತ್ತೀರಾ? ಬನ್ನಿ ಚರ್ಚೆಗೆ, ನಿಮ್ಮ ಅಪ್ಪ-ಮಕ್ಕಳ ಬಣ್ಣ ಬಯಲು ಮಾಡುತ್ತೇನೆ. ನಾನು ಸುಮ್ಮನೆ ಇದ್ದೇನೆ. ಹಾಗಂತ ಬಾಯಿಗೆ ಬಂದಂತೆ ಮಾತನಾಡಿದರೆ ಹುಷಾರ್ ಎಂದು ಏರು ಧ್ವನಿಯಲ್ಲಿ ಏಕವಚನದಲ್ಲಿ ವಾಗ್ದಾಳಿ ನಡೆಸಿದರು.
ಈ ಸಂದರ್ಭದಲ್ಲಿ ಆಡಳಿತ ಮತ್ತು ಪ್ರತಿಪಕ್ಷ ಸದಸ್ಯರಗಳ ನಡುವೆ ಆರೋಪ-ಪ್ರತ್ಯಾರೋಪಗಳ ಸುರಿಮಳೆ ನಡೆಯಿತು. ಆಗ ಸ್ಪೀಕರ್ ಕೆ.ಜಿ.ಬೋಪಯ್ಯ ಅವರು ಕಲಾಪವನ್ನು ಬುಧವಾರಕ್ಕೆ ಮುಂದೂಡಿದರು. ಮತ್ತೊಂದೆಡೆ ವಿಧಾನಪರಿಷತ್‌ನಲ್ಲಿಯೂ ಸಸೂತ್ರವಾಗಿ ಕಲಾಪ ನಡೆಯದೇ ಅಲ್ಲಿಯೂ ಕಲಾಪವನ್ನು ಸಭಾಧ್ಯಕ್ಷ ಡಿ.ಎಚ್.ಶಂಕರಮೂರ್ತಿ ನಾಳೆಗೆ ಮುಂದೂಡಿದರು.
ಸಿಬಿಐ ತನಿಖೆಗೆ ಕಾಂಗ್ರೆಸ್ ಒತ್ತಾಯ; ವಿಧಾನ ಮಂಡಲದ ಕಲಾಪ ಬೆಳಿಗ್ಗೆ ಆರಂಭವಾಗುತ್ತಿದ್ದಂತೆಯೇ ಅಗಲಿದ ಸದಸ್ಯ ಫರ್ನಾಂಡಿಸ್ ಅವರಿಗೆ ಸಂತಾಪ ಸೂಚನೆ ಮಾಡಲಾಯಿತು. ಆ ನಂತರ ವಿಪಕ್ಷ ನಾಯಕ ಸಿದ್ದರಾಮಯ್ಯ ಅವರು ಸರಕಾರದ ಭ್ರಷ್ಟಾಚಾರದ ವಿರುದ್ಧ ಮಂಡಿಸಿರುವ ನಿಲುವಳಿ ಸೂಚನೆಗೆ ಅವಕಾಶ ಕೊಡಬೇಕು ಎಂದು ಹೇಳುವ ಮೂಲಕ ಮತ್ತೆ ಪ್ರತಿಭಟನೆ, ಆರೋಪ-ಪ್ರತ್ಯಾರೋಪಕ್ಕೆ ಚಾಲನೆ ಕೊಟ್ಟರು.
ಮುಖ್ಯಮಂತ್ರಿಗಳು ಹೇಳುವುದು ಒಂದು, ಮಾಡುವುದು ಇನ್ನೊಂದು. ದಾಖಲೆ ಸಮೇತ ಚರ್ಚೆಗೆ ಸಿದ್ದವಾಗಿ ಬನ್ನಿ ಎಂದು ಹೇಳಿದ್ದಾರೆ. ನಾವು ಕೂಡ ದಾಖಲೆಗಳ ಸಮೇತ ಬಂದಿದ್ದೇವೆ. ಚರ್ಚೆ ಮಾಡೋಣ. ಪಲಾಯನವಾದ ಬೇಡ. ಇದುವರೆಗೂ ಯಾರೇ ಅಕ್ರಮ, ಅನ್ಯಾಯ, ಸ್ವಜನ ಪಕ್ಷಪಾತ, ಭ್ರಷ್ಟಾಚಾರ ಮಾಡಿದ್ದರೂ ಎಲ್ಲವನ್ನೂ ಸೇರಿಸಿ ಸಿಬಿಐ ತನಿಖೆಗೆ ಕೊಟ್ಟು ಬಿಡಿ. ಚರ್ಚೆ ಬೇಡ ಎಂದು ಸಿದ್ದು ಒತ್ತಾಯಿಸಿದರು.
ಬಿಜೆಪಿಯದು ದ್ವಂದ್ದ ನೀತಿ. ಅಧಿಕಾರಕ್ಕಾಗಿ ಎಂತಹ ರಾಜಕಾರಣವನ್ನಾದರೂ ಮಾಡುತ್ತಾರೆ. ಆಪರೇಶನ್ ಕಮಲದ ಮೂಲಕ ಅಧಿಕಾರ ಹಿಡಿಯಬೇಕೇ ವಿನಃ, ಜನರ ತೀರ್ಪಿನಿಂದ ಅಲ್ಲ ಎಂದು ವ್ಯಂಗ್ಯವಾಡಿದರು. ಈ ಸಂದರ್ಭದಲ್ಲಿಯೇ ಆರೋಪ-ಪ್ರತ್ಯಾರೋಪಗಳ ನಡುವೆಯೇ ಸ್ಪೀಕರ್ ಕೆ.ಜಿ.ಬೋಪಯ್ಯ ಅವರು ಭೋಜನ ವಿರಾಮಕ್ಕೆ ಕಲಾಪವನ್ನು ಮುಂದೂಡಿದ್ದರು.