ವಿಶ್ವಾಸಮತ ವೇಳೆ ಗದ್ದಲಕ್ಕೆ ಸಿದ್ದು, ಡಿಕೆಶಿ ಕುಮ್ಮಕ್ಕು?: ವರದಿ
ಬೆಂಗಳೂರು, ಬುಧವಾರ, 12 ಜನವರಿ 2011( 12:01 IST )
ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ನೇತೃತ್ವದ ಸರಕಾರ ಕಳೆದ ವರ್ಷ ಅಕ್ಟೋಬರ್ 10ರಂದು ವಿಶ್ವಾಸ ಮತ ಯಾಚನೆ ದಿನ ಪ್ರತಿಪಕ್ಷಗಳ ಶಾಸಕರು ನಡೆಸಿದ ಗದ್ದಲಕ್ಕೆ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್, ರೋಷನ್ ಬೇಗ್ ಕುಮ್ಮಕ್ಕು ಕಾರಣ ಎಂದು ಪ್ರಕರಣಕ್ಕೆ ಸಂಬಂಧಿಸಿದಂತೆ ರಚಿಸಿದ ಸದನ ಸಮಿತಿ ವರದಿ ತಿಳಿಸಿದ್ದು, ಸುಮಾರು 15 ಶಾಸಕರ ಅಮಾನತಿಗೆ ಶಿಫಾರಸು ಮಾಡಿದೆ ಎನ್ನಲಾಗಿದೆ.
ಗದ್ದಲ ಪ್ರಕರಣದ ಕುರಿತು ರಚಿಸಲಾಗಿದ್ದ ಸದನ ಸಮಿತಿ ವರದಿ ಬಹಿರಂಗಗೊಂಡಿದೆ. ಪ್ರಕರಣವನ್ನು ಬಿಜೆಪಿಯ ಹಿರಿಯ ಶಾಸಕ ಅಪ್ಪಚ್ಚು ರಂಜನ್ ನೇತೃತ್ವದ ಸಮಿತಿ ಸಿದ್ದಪಡಿಸಿರುವ ವರದಿ ವಿಧಾನಸಭಾಧ್ಯಕ್ಷರಿಗೆ ಸಲ್ಲಿಸಲು ಮಾತ್ರ ಬಾಕಿ ಉಳಿದಿದೆ.
ಪಕ್ಷೇತರ ಶಾಸಕರನ್ನು ಅಮಾನತುಗೊಳಿಸಿದ್ದರೂ ಸಹ ಅವರನ್ನು ಸದನದೊಳಕ್ಕೆ ಕರೆ ತಂದು ಗದ್ದ ಎಬ್ಬಿಸಿರುವ ಕಾರಣಕ್ಕೆ ಸಮಿತಿ ಕಾಂಗ್ರೆಸ್ ಮತ್ತು ಜೆಡಿಎಸ್‌ನ 15 ಶಾಸಕರನ್ನು ವಿಚಾರಣೆಗೆ ಒಳಪಡಿಸಿತ್ತು. ಅಂತೂ ಸೋರಿಕೆಯಾಗಿರುವ ವರದಿ ಪ್ರಕಾರ, ಸಮಿತಿ ಸಿದ್ದರಾಮಯ್ಯ, ಡಿಕೆಶಿ, ರೋಷನ್ ಬೇಗ್, ಅಭಯಚಂದ್ರ ಮತ್ತು ಜೆಡಿಎಸ್‌ನ ಸಾ.ರಾ.ಮಹೇಶ್ ಅವರ ಕುಮ್ಮಕ್ಕೇ ಕಾರಣ ಎಂದು ವಿವರಿಸಿದೆ.
ಆದರೆ ಆಡಳಿತ ಪಕ್ಷದ ಸದಸ್ಯರು ತಮ್ಮ, ತಮ್ಮ ಸ್ಥಾನಗಳಲ್ಲಿ ಗಂಭೀರವಾಗಿ ಕುಳಿತಿದ್ದರು ಎಂದು ಹೇಳಿದೆ. ಅಷ್ಟೇ ಅಲ್ಲ ವಿಧಾನಸಭೆ ಕಲಾಪವನ್ನು ಚಿತ್ರೀಕರಿಸುವ ತಾಂತ್ರಿಕ ತಂಡ ಲೋಪ ಎಸಗಿದ್ದು, ಈ ತಂಡದ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕೆಂದು ಸಮಿತಿ ಶಿಫಾರಸು ಮಾಡಿದೆ.
2010ರ ಅಕ್ಟೋಬರ್ 11ರಂದು ಯಡಿಯೂರಪ್ಪ ಸರಕಾರದ ವಿಶ್ವಾಸಮತ ಯಾಚನೆ ಸಂದರ್ಭದಲ್ಲಿ ವಿಧಾನಸಭೆಯಲ್ಲಿ ನಡೆದ ಗದ್ದಲಕ್ಕೆ ಸಂಬಂಧಿಸಿದಂತೆ ತನಿಖೆಗೆ ರಚಿಸಲಾಗಿದ್ದ ಸದನ ಸಮಿತಿಯ ವರದಿ ಬಹಿರಂಗಗೊಂಡಿದ್ದು, ಸಿಸಿ ಟಿವಿಯ ದೃಶ್ಯಗಳನ್ನೇ ತಿದ್ದಲಾಗಿರುವ ಅಂಶವು ಈ ವರದಿಯಲ್ಲಿ ಉಲ್ಲೇಖವಾಗಿದೆ.
ವಿಧಾನಸಭೆಯ ಒಳಗಿದ್ದ ಕ್ಯಾಮರಾಗಳಲ್ಲಿನ ದೃಶ್ಯಗಳನ್ನು ಟ್ಯಾಂಪರ್ ಮಾಡಲಾಗಿದೆ. ಕೇವಲ ಆಡಳಿತ ಪಕ್ಷಗಳತ್ತ ಮಾತ್ರವೇ ಕ್ಯಾಮರಾ ಮುಖ ಮಾಡಿದ ದೃಶ್ಯಗಳಿದ್ದವು, ವಿಪಕ್ಷಗಳ ಸದಸ್ಯರ ಕೂಗಾಟ, ಆಟಾಟೋಪಗಳನ್ನು ತೋರಿಸುವ ದೃಶ್ಯಗಳೇ ಇಲ್ಲ ಎಂಬುದಾಗಿಯೂ ಸಮಿತಿ ದೂರಿದೆ ಎನ್ನಲಾಗಿದೆ.
15 ಜನ ಶಾಸಕರ ಮೇಲೆ ದೂರು ದಾಖಲಾಗಿತ್ತು. ಅವರ ವಿಚಾರಣೆ ಸಂದರ್ಭ ಅವರು ನೀಡಿದ ಹೇಳಿಕೆಗಳನ್ನೂ ಉಲ್ಲೇಖಿಸಲಾಗಿದೆ. ಅಂತೆಯೇ ಅವರು ವಿಚಾರಣೆ ಸಂದರ್ಭ ಉದ್ಧಟತನದಿಂದಲೂ ವರ್ತಿಸಿದ್ದಾರೆ ಎಂದು ವರದಿಯಲ್ಲಿ ದೂರಲಾಗಿದೆ.
ಅಮಾನತು ಶಿಕ್ಷೆ?: ನೆರೆಯ ಮಹಾರಾಷ್ಟ್ರ ಮತ್ತು ಛತ್ತೀಸ್‌ಗಡದಲ್ಲಿ ಇದೇ ರೀತಿ ವರ್ತನೆ ತೋರಿದ್ದ ಶಾಸಕರನ್ನು ನಾಲ್ಕು ವರ್ಷಗಳ ಕಾಲ ಸದನದಿಂದ ಅಮಾನತು ಮಾಡಿದ ನಿದರ್ಶನಗಳಿವೆ. ಇದರ ಮಾದರಿಯಲ್ಲೇ ಶಿಫಾರಸು ಮಾಡುವ ಮುನ್ಸೂಚನೆಯನ್ನು ಸಮಿತಿ ಈ ಹಿಂದೆ ನೀಡಿತ್ತು. ಇದೇ ಆಧಾರದಲ್ಲಿ ಶಿಫಾರಸು ಮಾಡಿದ್ದರೆ ಪ್ರತಿಪಕ್ಷಗಳ 15 ಸದಸ್ಯರು ಅಮಾನತು ಶಿಕ್ಷೆಗೆ ಗುರಿಯಾಗುವ ಸಾಧ್ಯತೆಗಳು ದಟ್ಟವಾಗಿದೆ .