ಜೆಡಿಎಸ್ ಮುಖಂಡ ಎಚ್.ಡಿ.ರೇವಣ್ಣ ನೇತೃತ್ವದಲ್ಲಿ ಶಾಸಕರು ದಾಖಲೆಗಳನ್ನು ಹೊಂದಿದ್ದ ದೊಡ್ಡ ಗಾತ್ರದ ಸೂಟ್‌ಕೇಸ್ ಅನ್ನು ತೆಗೆದುಕೊಂಡು ಶಂಖ, ಜಾಗಟೆ ಬಾರಿಸುತ್ತ ಗೋವಿಂದ, ಗೋವಿಂದ ಎಂದು ಕೂಗುತ್ತ ಸದನ ಪ್ರವೇಶಿಸಿದ ವಿನೂತನ ಘಟನೆ ಬುಧವಾರ ನಡೆಯಿತು. ಈ ಪ್ರಸಂಗ ಆಡಳಿತ ಮತ್ತು ಪ್ರತಿಪಕ್ಷ ಸದಸ್ಯರ ನಡುವೆ ವಾಕ್ಸಮರಕ್ಕೆ ಎಡೆಮಾಡಿಕೊಡುವ ಮೂಲಕ ಇಂದಿನ ಕಲಾಪ ಗದ್ದಲಕ್ಕೆ ಬಲಿಯಾಯಿತು.
ಜೆಡಿಎಸ್‌ನ ಎಚ್.ಡಿ.ರೇವಣ್ಣ, ಶಾಸಕ ಬಂಡೆಪ್ಪ ಕಾಶೆಂಪೂರ್ ಭೂ ಹಗರಣಗಳ ದಾಖಲೆ ಹೊಂದಿದ ದೊಡ್ಡ ಗಾತ್ರದ ಸೂಟ್‌ಕೇಸ್ ಅನ್ನು ಹಿಡಿದುಕೊಂಡಿದ್ದರೆ, ಕೆಲವು ಶಾಸಕರು ಜಾಗಟೆ ಬಾರಿಸುತ್ತ ಸದನ ಪ್ರವೇಶಿಸಿದರು. ಇದರಿಂದ ಕೋಪಗೊಂಡ ಸ್ಪೀಕರ್ ಕೆ.ಜಿ.ಬೋಪಯ್ಯ, ಇದು ತುಂಬಾ ಅತಿಯಾಯಿತು. ಆ ಸೂಟ್‌ಕೇಸ್ ಅನ್ನು ಎತ್ತಿ ಹೊರ ಎಸೆಯಿರಿ ಎಂದು ಮಾರ್ಷಲ್‌ಗಳಿಗೆ ಆದೇಶ ನೀಡಿದರು.
ಮಾರ್ಷಲ್‌ಗಳು ಸೂಟ್‌ಕೇಸ್ ಅನ್ನು ತೆಗೆದುಕೊಳ್ಳಲು ಮುಂದಾದಾಗ ಜೆಡಿಎಸ್, ಕಾಂಗ್ರೆಸ್ ಸದಸ್ಯರು ತೀವ್ರ ವಿರೋಧ ವ್ಯಕ್ತಪಡಿಸಿದರು. ಆಗ ಸ್ಪೀಕರ್ ಅವರು ಮಾನ್ಯ ರೇವಣ್ಣನವರೇ ಇದು ಸರಿಯಾದ ವರ್ತನೆಯಲ್ಲ, ನಿಮ್ಮ ಶಾಸಕರಿಗೆ ಬುದ್ದವಾದ ಹೇಳಿ, ಇಲ್ಲದಿದ್ದರೆ ಶಾಸಕರ ಹೆಸರು ಹೇಳಿ ಹೊರಹಾಕ್ಬೇಕಾಗುತ್ತದೆ ಎಂಬ ಎಚ್ಚರಿಕೆಯನ್ನೂ ನೀಡಿದರು.
ಆದರೆ ಅದ್ಯಾವುದನ್ನೂ ಕೇಳಿಸಿಕೊಳ್ಳದ ಜೆಡಿಎಸ್ ಸದಸ್ಯರು ಸೂಟ್‌ಕೇಸ್‌ನಲ್ಲಿದ್ದ ಕಟ್ಟು, ಕಟ್ಟು ದಾಖಲೆಗಳನ್ನು ಹೊರ ತೆಗೆದು, ಖಾಲಿ ಸೂಟ್‌ಕೇಸ್ ಅನ್ನು ಮಾತ್ರ ಮಾರ್ಷಲ್‌ಗಳಿಗೆ ಒಪ್ಪಿಸಿದರು. ನಂತರ ಅದನ್ನು ಹೊರಹಾಕಿದರು. ಮತ್ತೊಂದೆಡೆ ಜೆಡಿಎಸ್ ಸದಸ್ಯರು ನಿನ್ನೆ ಮುಖ್ಯಮಂತ್ರಿಗಳು ಆಕ್ರೋಶಿತರಾಗಿ ದಾಖಲೆಗಳನ್ನು ಪ್ರದರ್ಶಿಸಿದ ರೀತಿಯಲ್ಲೇ, ಇಂದು ರೇವಣ್ಣ ಕೂಡ ದಾಖಲೆಗಳ ಕಟ್ಟುಗಳನ್ನು ಸದನದಲ್ಲಿ ಎತ್ತಿ ತೋರಿಸಿದರು.
ಏತನ್ಮಧ್ಯೆ ವಿಪಕ್ಷಗಳ ವರ್ತನೆಗೆ ಆಡಳಿತಾರೂಢ ಬಿಜೆಪಿ ಸದಸ್ಯರು ತೀವ್ರ ಆಕ್ಷೇಪ ವ್ಯಕ್ತಪಡಿಸಿದರು. ಈ ಸಂದರ್ಭದಲ್ಲಿ ವಿಪಕ್ಷ ನಾಯಕ ಸಿದ್ದರಾಮಯ್ಯನವರು ಮಾತನಾಡುತ್ತ, ನಿನ್ನೆ ಮಾನ್ಯ ಮುಖ್ಯಮಂತ್ರಿಗಳೇ ಸೂಟ್‌ಕೇಸ್‌ನಲ್ಲಿ ದಾಖಲೆ ಪತ್ರ ತಂದು ಸದನದಲ್ಲಿ ಪ್ರದರ್ಶಿಸಿದ್ದರು. ಹಾಗಾಗಿ ಇಂದು ಜೆಡಿಎಸ್‌ನವರು ತಮ್ಮ ಬಳಿ ಇದ್ದ ದಾಖಲೆ ತಂದು ಪ್ರದರ್ಶಿಸಿದ್ದಾರೆ. ಅದರಲ್ಲಿ ತಪ್ಪೇನಿದೆ ಎಂದು ಖಾರವಾಗಿ ಪ್ರಶ್ನಿಸಿದರು. ಈ ಪ್ರತಿಕ್ರಿಯೆಗೆ ಸ್ಪೀಕರ್ ಕೆ.ಜಿ.ಬೋಪಯ್ಯ ಅಸಮಾಧಾನ ವ್ಯಕ್ತಪಡಿಸಿದರು.
ಯಡಿಯೂರಪ್ಪ ನೇತೃತ್ವದ ಸರಕಾರ ರಾಜೀನಾಮೆ ಕೊಡುವವರೆಗೂ ಸದನದ ಕಲಾಪ ನಡೆಯಲು ಬಿಡಲ್ಲ ಎಂದು ಸಿದ್ದರಾಮಯ್ಯ ಪಟ್ಟು ಹಿಡಿದಾಗ ಸದನದಲ್ಲಿ ಕೋಲಾಹಲ, ಗದ್ದಲ ಮಿತಿಮೀರಿ ಹೋಗಿತ್ತು. ಆಗ ಸ್ಪೀಕರ್ ಅವರು ಗದ್ದಲದ ನಡುವೆಯೇ 8 ವಿಧೇಯಕಗಳನ್ನು ಅಂಗೀಕರಿಸಲಾಯಿತು. ಪ್ರತಿಭಟನೆ ನಡುವೆ ವಿಧೇಯಕ ಅಂಗೀಕರಿಸಿದ್ದನ್ನು ವಿರೋಧಿಸಿ ಪ್ರತಿಪಕ್ಷಗಳ ಸದಸ್ಯರು ಸಭಾತ್ಯಾಗ ಮಾಡಿದರು.
ಆಗ ಸಿದ್ದರಾಮಯ್ಯನವರು, ಏಯ್ ಕೂಗಿ, ಕೂಗಿ ಎಂದಾಗ ಕಾಂಗ್ರೆಸ್ ಮತ್ತು ಜೆಡಿಎಸ್ ಸದಸ್ಯರು, ಭ್ರಷ್ಟ ಸರಕಾರಕ್ಕೆ ಧಿಕ್ಕಾರ, ಡೌನ್, ಡೌನ್ ಬಿಜೆಪಿ, 500 ಕೋಟಿ ಬಿಜೆಪಿ ಲೂಟಿ ಎಂಬ ಘೋಷಣೆ ಕೂಗಿ ಸದನದ ಬಾವಿಗಿಳಿದು ಪ್ರತಿಭಟನೆ ನಡೆಸಿದ್ದರು.
ಎಚ್‌ಡಿಕೆ ವಿರುದ್ಧ ಹಕ್ಕುಚ್ಯುತಿ ಮಂಡನೆ; ಒಂದೆಡೆ ಪ್ರತಿಪಕ್ಷಗಳು ಗದ್ದಲ, ಪ್ರತಿಭಟನೆ ನಡೆಸುತ್ತಿದ್ದಂತೆಯೇ, ಮಂಗಳವಾರದ ಕಲಾಪಕ್ಕೆ ಸಂಬಂಧಿಸಿದಂತೆ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು ಕಲಾಪವನ್ನು ಹೆಂಡದಂಗಡಿಗೆ ಹೋಲಿಕೆ ಮಾಡಿ ಹೇಳಿಕೆ ನೀಡಿದ್ದರು. ಆ ನಿಟ್ಟಿನಲ್ಲಿ ಕುಮಾರಸ್ವಾಮಿ ವಿರುದ್ಧ ಹಕ್ಕು ಚ್ಯುತಿ ಮಂಡನೆಗೆ ಸ್ಪೀಕರ್ ಅವರು ಸೂಚಿಸಿದರು. ಬಿಜೆಪಿ ಸದಸ್ಯ ಸುರೇಶ್ ಗೌಡ ಹಕ್ಕುಚ್ಯುತಿ ಮಂಡಿಸಿದರು. ಅನುಮೋದನೆ ನಂತರ ಅದನ್ನು ಸ್ಪೀಕರ್ ಅವರು ವಿಚಾರಣೆಗಾಗಿ ಹಕ್ಕು ಬಾಧ್ಯತಾ ಸಮಿತಿಗೆ ವರ್ಗಾಯಿಸಿದರು. ಅಲ್ಲದೇ ಹಕ್ಕು ಚ್ಯುತಿ ಮಂಡನೆಯ ಪ್ರತಿಯನ್ನು ಲೋಕಸಭಾ ಸ್ಪೀಕರ್ ಅವರಿಗೆ ಕಳುಹಿಸಲು ಕಲಾಪದಲ್ಲಿ ನಿರ್ಣಯ ಕೈಗೊಳ್ಳಲಾಯಿತು. ಲೋಕಸಭಾ ಸ್ಪೀಕರ್ ಅವರ ನಿಲುವು ಏನು ಎಂಬುದನ್ನ ತಿಳಿದು ಮುಂದಿನ ಕ್ರಮ ಜರುಗಿಸಲಾಗುತ್ತದೆ ಎಂದು ಕಾನೂನು ಸಚಿವ ಸುರೇಶ್ ಕುಮಾರ್ ಕಲಾಪದ ನಂತರ ಸುದ್ದಿಗಾರರ ಜತೆ ಮಾತನಾಡುತ್ತ ತಿಳಿಸಿದ್ದಾರೆ.
ವಿಪಕ್ಷಗಳ ಗದ್ದಲದ ನಡುವೆಯೇ ಕಲಾಪ ನಡೆಸುತ್ತಿದ್ದರಿಂದ ಆಕ್ರೋಶಗೊಂಡ ಜೆಡಿಎಸ್ ಮತ್ತು ಕಾಂಗ್ರೆಸ್ ಸದಸ್ಯರು ಸಭಾತ್ಯಾಗ ಮಾಡಿ ಹೊರನಡೆದರು. ಮತ್ತೊಂದೆಡೆ ವಿಧಾನಪರಿಷತ್‌ನಲ್ಲೂ ಜೆಡಿಎಸ್ ಸದಸ್ಯರು ಜಾಗಟೆ ಬಾರಿಸುತ್ತ ಸದನ ಪ್ರವೇಶಿಸಿಲು ಯತ್ನಿಸಿದಾಗ ಮಾರ್ಷಲ್‌ಗಳು ತಡೆದಾಗ ಜಟಾಪಟಿ ನಡೆಯಿತು.