ಪ್ರಾದೇಶಿಕ ಪಕ್ಷವಾದ ಜಾತ್ಯತೀತ ಜನತಾದಳವನ್ನು ಬೇರು ಸಹಿತ ಕಿತ್ತು ಹಾಕುತ್ತೇನೆ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರು ಕನಸು ಕಾಣುತ್ತಿದ್ದಾರೆ. ಇದು ಅವರ ಜನ್ಮದಲ್ಲಿ ಸಾಧ್ಯವಿಲ್ಲ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಪಕ್ಷದ ಕಚೇರಿಯಲ್ಲಿ ಬುಧವಾರ ಸುದ್ದಿಗಾರರ ಜತೆ ಮಾತನಾಡಿದ ಅವರು, ಈ ರಾಜ್ಯದಲ್ಲಿ ಬಿಜೆಪಿ, ಕಾಂಗ್ರೆಸ್ ಮಾತ್ರ ಇರಬೇಕು. ಜೆಡಿಎಸ್ ಅನ್ನು ಮುಗಿಸುತ್ತೇನೆ ಎಂಬ ಉದ್ದಟತನದ ಮಾತುಗಳನ್ನಾಡಿದ್ದಾರೆ. ಇದು ಅವರಿಗೆ ಶೋಭೆ ತರುವ ಹೇಳಿಕೆ ಅಲ್ಲ. ದೇಶದ ಕೆಲವು ರಾಜ್ಯಗಳಲ್ಲಿ ಆಡಳಿತ ನಡೆಸುತ್ತಿರುವ ಪ್ರಾದೇಶಿಕ ಪಕ್ಷ ಅಭಿವೃದ್ಧಿ ಪರವಾಗಿವೆ ಎಂಬುದು ಸಾಬೀತಾಗಿದೆ ಎಂದರು.
ಬಿಹಾರದಲ್ಲಿಯೂ ಜೆಡಿಯು ಜತೆ ಬಿಜೆಪಿ ಕೈಜೋಡಿಸಿ ಆಡಳಿತ ನಡೆಸುತ್ತಿದೆ. ಹಾಗಂತ ಬಿಹಾರದ ಜನ ಬಿಜೆಪಿ ಮುಖ ನೋಡಿ ವೋಟ್ ಹಾಕಿಲ್ಲ ಅಂತ ವಾಗ್ದಾಳಿ ನಡೆಸಿದರು. ಜೆಡಿಎಸ್ ಅಭಿವೃದ್ದಿ ಕೆಲಸಗಳಲ್ಲಿ ಅಡ್ಡಗಾಲು ಹಾಕಿಲ್ಲ. ಎಲ್ಲ ರೀತಿಯಿಂದಲೂ ಸಹಕಾರ ನೀಡಿದೆ. ನೆರೆಯ ತಮಿಳುನಾಡು ರಾಜ್ಯದಲ್ಲಿ ಇರುವ ಪ್ರಾದೇಶಿಕ ಪಕ್ಷಗಳಿಂದ ಅಲ್ಲಿ ಅಭಿವೃದ್ಧಿ ಸಾಧ್ಯವಾಗಿಲ್ಲವೇ ಎಂದು ಪ್ರಶ್ನಿಸಿದರು. ಆದರೆ ಯಡಿಯೂರಪ್ಪನವರು ರಾಜ್ಯದಲ್ಲಿ ಪ್ರಾದೇಶಿಕ ಇರಲೇಬಾರದು ಎಂದು ಹೇಳುತ್ತಿರುವುದು ಯಾವ ಆಧಾರದ ಮೇಲೆ ಎಂದರು.
ಮುಖ್ಯಮಂತ್ರಿ ಯಡಿಯೂರಪ್ಪ ಮಾತೆತ್ತಿದರೆ ಅಪ್ಪ-ಮಕ್ಕಳ ಜಾತಕವನ್ನು ಬಯಲು ಮಾಡುತ್ತೇನೆ ಎಂದು ಹೇಳಿಕೆ ನೀಡುತ್ತಿದ್ದಾರೆ. ಎಲ್ಲದರ ಬಗ್ಗೆಯೂ ತನಿಖೆ ನಡೆಸಲಿ, ಅದಕ್ಕೆ ತಮ್ಮ ಸ್ವಾಗತ ಇದೆ ಎಂದು ವ್ಯಂಗ್ಯವಾಡಿದರು.
ಮುಖ್ಯಮಂತ್ರಿ ಯಡಿಯೂರಪ್ಪ ವಿಧಾನಸಭಾ ಕಲಾಪವನ್ನು ದುರ್ಬಳಕೆ ಮಾಡಿಕೊಂಡು ಜೆಡಿಎಸ್ ಮುಖಂಡರ ವಿರುದ್ಧ ಏಕ ವಚನದಲ್ಲಿ ದಾಳಿ ನಡೆಸಿದ್ದಾರೆ. ಇದು ಸರಿಯಲ್ಲ ಎಂದು ಅವರು ತರಾಟೆಗೆ ತೆಗೆದುಕೊಂಡರು. ಅಲ್ಲದೇ ತಮ್ಮ ವಿರುದ್ಧ ಹಕ್ಕುಚ್ಯುತಿ ಮಂಡಿಸಿರುವುದನ್ನು ಸ್ವಾಗತಿಸಿದರು. ಉದ್ದೇಶಪೂರ್ವಕವಾಗಿ ನಾನು ಮುಖ್ಯಮಂತ್ರಿ ವಿರುದ್ಧ ಪದಗಳನ್ನು ಬಳಸಿದ್ದೇನೆ. ಹಕ್ಕುಚ್ಯುತಿ ಮಂಡಿಸಲಿ ನಾನು ವಾದ ಮಂಡಿಸುತ್ತೇನೆ ಎಂದು ಸವಾಲು ಹಾಕಿದರು.