ನಗರದಲ್ಲಿ ಬೀದಿ ನಾಯಿಗಳ ಅಟ್ಟಹಾಸ ಮತ್ತೆ ಮುಂದುವರಿದಿದ್ದು, ಒಂದೂವರೆ ವರ್ಷದ ಮಗುವನ್ನು ಎಳೆದೊಯ್ದು ಕೈ-ಕಾಲು ತಿಂದ ಪರಿಣಾಮ ಮಗು ಸಾವನ್ನಪ್ಪಿರುವ ಹೃದಯ ವಿದ್ರಾವಕ ಘಟನೆ ಇಲ್ಲಿನ ಬಾಗಲೂರು ಬಳಿ ಬುಧವಾರ ನಡೆದಿದೆ.
ಬಾಗಲೂರು ಪೊಲೀಸ್ ಠಾಣೆಯ ಸಮೀಪವೇ ಇರುವ ಇಟ್ಟಿಗೆ ಕಾರ್ಖಾನೆ ಬಳಿ ಇಂದು ಮುಂಜಾನೆ ಮಲಗಿದ್ದ ಒಂದೂವರೆ ವರ್ಷದ ಪ್ರಶಾಂತ್ ಎಂಬ ಮಗುವನ್ನು ರಾಕ್ಷಸ ನಾಯಿಗಳು ಎಳೆದೊಯ್ದು, ನಿರ್ಜನ ಪ್ರದೇಶದಲ್ಲಿ ಮಗುವಿನ ಕೈ-ಕಾಲು ತಿಂದು ತೇಗಿದ್ದವು. ತೀವ್ರ ರಕ್ತಸ್ರಾವದಿಂದ ಮಗು ಸ್ಥಳದಲ್ಲೇ ಸಾವನ್ನಪ್ಪಿತ್ತು.
ಒರಿಸ್ಸಾ ಮೂಲದ ಸುಖದೇವ್ ಮತ್ತು ಕೈಕೇಯಿ ದಂಪತಿಗಳು ಮಗುವನ್ನು ಬಿಟ್ಟು, ಎಂದಿನಂತೆ ಇಟ್ಟಿಗೆ ಗೂಡಿನಲ್ಲಿ ಕೆಲಸ ಮಾಡುತ್ತಿದ್ದರು. ಆದರೆ ನಾಯಿಗಳು ಮಗುವನ್ನು ಎಳೆದೊಯ್ದು ಕಚ್ಚಿ, ಕಚ್ಚಿ ತಿನ್ನುತ್ತಿರುವಾಗ ಮಗು ಕೂಗಿಕೊಂಡ ಶಬ್ದ ಕೂಡ ಇವರಿಗೆ ಕೇಳಿಸಲಿಲ್ಲವಂತೆ. ಯಾಕೆಂದರೆ ಅದು ನಿರ್ಜನ ಪ್ರದೇಶವಾಗಿದ್ದು, ಇಟ್ಟಿಗೆ ಗೂಡಿನಲ್ಲಿ ಕೆಲಸ ಮಾಡುತ್ತಿದ್ದ ಕೆಲಸಗಾರರು ಸಂಗೀತ ಹಾಕಿಕೊಂಡು ಕೆಲಸ ಮಾಡುತ್ತಿದ್ದರಂತೆ. ಒಟ್ಟಾರೆ ಹೆತ್ತವರ ನಿರ್ಲಕ್ಷ್ಯದಿಂದಲೇ ಮಗು ಸಾವನ್ನಪ್ಪಿದೆ ಎಂದು ಸ್ಥಳೀಯರ ಆರೋಪ.
ಮಗುವಿನ ಕೈ-ಕಾಲು ಕಚ್ಚಿ ತಿಂದ ನಾಯಿಗಳು ಮುಖ, ದೇಹದ ಇತರ ಭಾಗಗಳನ್ನು ಕಚ್ಚಿದ ಪರಿಣಾಮ ಮಗು ಸಾವನ್ನಪ್ಪಿತ್ತು. ನಂತರ ನಾಯಿಗಳು ಓಡಿ ಹೋಗಿದ್ದವು. ಮನೆಯವರು ಮೊದಲು ಮಗುವಿಗಾಗಿ ಹುಡುಕಾಟ ನಡೆಸಿದ್ದರು. ನಂತರ ಸುಮಾರು ದೂರದಲ್ಲಿ ವಿಕಾರವಾಗಿ ಸತ್ತು ಬಿದ್ದ ಮಗು ಕಾಣಿಸಿದಾಗ ದಂಪತಿಗಳ ರೋದನ ಮುಗಿಲು ಮುಟ್ಟಿತ್ತು. ಸುಖದೇವ್ ದಂಪತಿಗಳ ಆರು ಮಕ್ಕಳಲ್ಲಿ ಪ್ರಶಾಂತ್ ಒಬ್ಬನೇ ಮಗನಾಗಿದ್ದ. ಸ್ಥಳಕ್ಕೆ ಆಗಮಿಸಿದ ಬಾಗಲೂರು ಪೊಲೀಸ್ ಅಧಇಕಾರಿಗಳು ಮುಂದಿನ ತನಿಖೆ ಕೈಗೊಂಡಿದ್ದು, ಅಂಬೇಡ್ಕರ್ ವೈದ್ಯಕೀಯ ಕಾಲೇಜಿನಲ್ಲಿ ಮಗುವಿನ ಮರಣೋತ್ತರ ಪರೀಕ್ಷೆ ನಡೆಸಿ ತಂದೆ-ತಾಯಿಯ ವಶಕ್ಕೆ ನೀಡಿದ್ದಾರೆ.