ನಾಟಕ ಕೇವಲ ಮನರಂಜನೆಗಲ್ಲ. ಅದು ಲೋಕಪ್ರಜ್ಞೆ ಬೆಳೆಸುವ ಜೀವಂತ ಮಾಧ್ಯಮ ಎಂದು ಸಾಹಿತಿ ಡಾ. ಎಚ್.ಎಸ್.ವೆಂಕಟೇಶಮೂರ್ತಿ ಅಭಿಪ್ರಾಯಪಟ್ಟರು.
ತಾಲೂಕಿನ ಮಲ್ಲಾಡಿಹಳ್ಳಿ ಅನಾಥ ಸೇವಾಶ್ರಮ ವಿಶ್ವಸ್ತ ಸಮಿತಿಯಿಂದ ಸೂರದಾಸ್ಜೀ ರಂಗಮಂಟಪದಲ್ಲಿ ಏರ್ಪಡಿಸಿದ್ದ ಪುಣ್ಯಾರಾಧನೆ-ನಾಟಕೋತ್ಸವದಲ್ಲಿ ತಿರುಕರಂಗ-8ರ ನಾಟಕಗಳ ಪುಸ್ತಕೆ ಬಿಡುಗಡೆ ಮಾಡಿ ಮಾತನಾಡಿದರು.
ಬದುಕಿನ ಪ್ರತಿಬಿಂಬವನ್ನು ನಾಟಕ ರಂಗವು ಅನಾವರಣಗೊಳಿಸುತ್ತದೆ. ಗ್ರಾಮೀಣ ಪ್ರದೇಶದಲ್ಲಿರುವ ಜನಪದ, ನಾಟಕ, ಕಲೆಗಳು ಜೀವಂತ ಸಂಸ್ಕೃತಿಗಳು. ಅವುಗಳ ಪೋಷಣೆ ನಮ್ಮ ಕರ್ತವ್ಯ. ನಾಡು ನುಡಿ ಕಟ್ಟುವ ಕೆಲಸಕ್ಕೆ ರಂಗಕಲೆಯನ್ನು ಬೆಳೆಸಿಕೊಳ್ಳಬೇಕೆಂದು ಸಲಹೆ ನೀಡಿದರು.
ರಂಗದಾಸೋಹದ ಪರಂಪರೆ ಹುಟ್ಟು ಹಾಕಿದ ರಾಘವೇಂದ್ರ ಸ್ವಾಮೀಜಿ ಅವರು ಕನ್ನಡ ಸಂಸ್ಕೃತಿ, ಕಲೆ, ಸಾಹಿತ್ಯವನ್ನು ಉಳಿಸಿ ಬೆಳೆಸುವ ಪರಂಪರೆ ಹುಟ್ಟು ಹಾಕಿದರು. ರಂಗನಾಯಕರ ಸ್ಮರಣೆಯನ್ನು ರಂಗದಾಸೋಹದ ಮೂಲಕ ಜನಮನಕ್ಕೆ ತಲುಪಿಸುತ್ತಿರುವ ಮಲ್ಲಾಡಿಹಳ್ಳಿ ಆಶ್ರಮದ ಕಾಯಕ ನಿರಂತರವಾಗಿ ನಡೆಯಲು ಎಲ್ಲರ ಪ್ರೋತ್ಸಾಹ ಅಗತ್ಯ ಎಂದರು.
ಚಲನಚಿತ್ರ ನಟ ಶಿವರಾಂ ಮಾತನಾಡಿ, ಕಲಾವಿದ ತಯಾರಾಗುವುದು ರಂಗಭೂಮಿಯಲ್ಲಿ. ಪ್ರೇಕ್ಷಕರು ಕಲಾವಂತಿಕೆಯನ್ನು ಬೆಂಬಲಿಸಬೇಕು. 52 ವರ್ಷ ಚಲನಚಿತ್ರ ಕ್ಷೇತ್ರದಲ್ಲಿ ಬೆಳೆದಿರುವುದು ಜನರ ಸಹಕಾರ ಕಾರಣ. 30 ವರ್ಷಗಳ ಹಿಂದೆ ವರನಟ ಡಾ. ರಾಜ್ ಕುಮಾರ್ ಅವರ ಜತೆ ಮಲ್ಲಾಡಿಹಳ್ಳಿಗೆ ಬಂದಿದ್ದೆ. ಸ್ವಾಮೀಜಿಯ ಚಿಂತನಶೀಲ ವ್ಯಕಿತ್ವ, ಸಮಾಜದ ಬಗ್ಗೆ ಇದ್ದ ಕಳಕಳಿ ಅನನ್ಯ ಎಂದರು.
ಕಲೆಯೆನ್ನುವುದು ಸಮಾಜದ ಕೈಗನ್ನಡಿ. ಈ ಕನ್ನಡಿ ಪಾದರಸ ಕಳೆದುಕೊಂಡಿದೆ. ಜೀವನದಿಂದ ಕಲೆಯೋ, ಕಲೆಯಿಂದ ಜೀವನವೋ ತಿಳಿಯುತ್ತಿಲ್ಲ ಎಂದು ಈ ಸಂದರ್ಭದಲ್ಲಿ ಹೇಳಿದರು.