ಇಸ್ಕಾನ್‌ನ ಅಕ್ಷಯ ಪಾತ್ರೆ ಯೋಜನೆ ವಿರುದ್ಧ ಕಾಂಗ್ರೆಸ್ ಮುಖಂಡ ಡಿ.ಕೆ.ಶಿವಕುಮಾರ್ ಮಾಡಿರುವ ಆರೋಪದ ಕುರಿತು ಸದನ ಸಮಿತಿ ನೀಡಿರುವ ವರದಿಯಲ್ಲಿ ಇಸ್ಕಾನ್‌ಗೆ ಕ್ಲೀನ್ ಚಿಟ್ ನೀಡಿದೆ. ಇದು ಸತ್ಯಕ್ಕೆ ಸಂದ ಜಯ ಎಂಬುದಾಗಿ ಇಸ್ಕಾನ್ ಪ್ರತಿಕ್ರಿಯೆ ನೀಡಿದೆ.
ಶಾಲಾ ವಿದ್ಯಾರ್ಥಿಗಳಿಗೆ ಮಧ್ಯಾಹ್ನದ ಬಿಸಿಯೂಟ ನೀಡುವ ಯೋಜನೆಯಡಿಯಲ್ಲಿ ಸರಕಾರದ ನೆರವು ಪಡೆಯುತ್ತಿದ್ದರೂ, ರಾಜ್ಯದ ಮಕ್ಕಳ ಫೋಟೋಗಳನ್ನು ಭಿಕ್ಷುಕರಂತೆ ಬಳಸಿಕೊಂಡು ವಿದೇಶಗಳಲ್ಲಿ ದೇಣಿಗೆ ಸಂಗ್ರಹಿಸುವ ಮೂಲಕ ಇಸ್ಕಾನ್ ಅವ್ಯವಹಾರ ನಡೆಸುತ್ತಿದೆ ಎಂಬ ಡಿಕೆಶಿ ಆರೋಪದ ಬಗ್ಗೆ ತನಿಖೆ ನಡೆಸಿರುವ ಬಿಜೆಪಿ ಶಾಸಕ ಯೋಗೀಶ್ ಭಟ್ ನೇತೃತ್ವದ ಸದನ ಸಮಿತಿ ವರದಿ ಸಂಸ್ಥೆಗೆ ಕ್ಲೀನ್ ಚಿಟ್ ನೀಡಿತ್ತು.
ಈ ಬಗ್ಗೆ ಬುಧವಾರ ಇಸ್ಕಾನ್ ಅಧ್ಯಕ್ಷ ಮಧು ಪಂಡಿತ್ ದಾಸ್ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ನಾವು ಯಾವುದೇ ಅವ್ಯವಹಾರ ಅಥವಾ ತಪ್ಪು ಮಾಡಿಲ್ಲ. ಹೀಗಾಗಿ ಧರ್ಮ ನಮ್ಮ ಕಡೆಗೆ ಇದೆ. ಆದರೆ, ದುರದೃಷ್ಟವಶಾತ್ ಡಿಕೆಶಿ ಅಧರ್ಮದ ಕಡೆ ಸೇರಿ ನಮ್ಮ ವಿರುದ್ಧ ಸುಳ್ಳು ಆರೋಪ ಹೊರಿಸಿದರು. ಅಂತಿಮವಾಗಿ ಸದನ ಸಮಿತಿ ನೀಡಿದ ವರದಿಯಲ್ಲಿ ಧರ್ಮ ಗೆದ್ದಿದೆ. ಅಧರ್ಮ ಸೋತಿದೆ ಎಂದರು.
ಇಸ್ಕಾನ್ ಅಕ್ಷಯಪಾತ್ರೆ ಯೋಜನೆ ಮೂಲಕ ದೇಶದ 12.5 ಲಕ್ಷ ಮಕ್ಕಳಿಗೆ ಮಧ್ಯಾಹ್ನದ ಊಟ ನೀಡಲಾಗುತ್ತಿದೆ. ಇದರಲ್ಲಿ ಶೇ.60ರಷ್ಟು ಹಣವನ್ನು ಕೇಂದ್ರ ಮತ್ತು ರಾಜ್ಯ ಸರಕಾರಗಳು ನೀಡಿದರೆ, ಉಳಿದ ಹಣವನ್ನು ನಾವು ಭಿಕ್ಷೆ ಎತ್ತಿ ಸಂಗ್ರಹಿಸುತ್ತಿದ್ದೇವೆ. ಇದರಲ್ಲಿ ಯಾವುದೇ ದುರುಪಯೋಗ ಮಾಡುತ್ತಿಲ್ಲ. ಅಷ್ಟೇ ಅಲ್ಲ ದೇಶದ ಗೌರವವನ್ನು ವಿದೇಶಗಳಲ್ಲಿ ಹರಾಜು ಹಾಕುವ ಕೆಲಸ ಇಸ್ಕಾನ್ ಮಾಡಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.