ಶಾಸಕರ ಅನರ್ಹ ಪ್ರಕರಣ ನ್ಯಾಯಾಲಯದ ತೀರ್ಪಿಗೆ ಕಾದಿರುವಾಗಲೇ ಮತ್ತೆ ಎಂಟು ಮಂದಿ ಶಾಸಕರನ್ನು ಸದಸ್ಯತ್ವದಿಂದ ಅಮಾನತುಗೊಳಿಸುವಂತೆ ವಿಶ್ವಾಸಮತಯಾಚನೆ ವೇಳೆ ನಡೆದ ಗದ್ದಲ ಪ್ರಕರಣಕ್ಕೆ ಸಂಬಂಧಿಸಿದಂತೆ ಶಾಸಕ ಅಪ್ಪಚ್ಚು ರಂಜನ್ ನೇತೃತ್ವದ ಸಮಿತಿಯ ವರದಿ ಶಿಫಾರಸು ಮಾಡಿರುವುದು ರಾಜ್ಯ ರಾಜಕಾರಣದಲ್ಲಿ ಅಲ್ಲೋಲ-ಕಲ್ಲೋಲ ಸೃಷ್ಟಿಸಿದೆ.
ಇಂದು ವಿಧಾನಸಭಾಧ್ಯಕ್ಷರ ಚುನಾವಣೆ ಹಾಗೂ ವಿಶ್ವಾಸಮತ ಯಾಚನೆ ವೇಳೆಯಲ್ಲಿ ನಡೆದ ಗದ್ದಲ ಪ್ರಕರಣಕ್ಕೆ ಸಂಬಂಧಿಸಿದಂತೆ ಅಪ್ಪಚ್ಚು ರಂಜನ್ ಮತ್ತು ಹೇಮಚಂದ್ರ ಸಾಗರ್ ನೇತೃತ್ವದ ಸಮಿತಿ ನೀಡಿದ್ದ ಪ್ರತ್ಯೇಕ ವರದಿ ವಿಧಾನಸಭೆಯಲ್ಲಿ ಮಂಡನೆಯಾಗಿದ್ದು, ಕಾಂಗ್ರೆಸ್-ಜೆಡಿಎಸ್‌ನ 15 ಸದಸ್ಯರ ಭವಿಷ್ಯದ ಮೇಲೆ ತೂಗುಗತ್ತಿ ಬಿದ್ದಿದಂತಾಗಿದೆ.
ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಕಳೆದ ಅಕ್ಟೋಬರ್ 11ರಂದು ವಿಶ್ವಾಸಮತ ಯಾಚನೆ ಸಂದರ್ಭದಲ್ಲಿ ಕೈಕೈ ಮಿಲಾಯಿಸುವ ಹಂತ ತಲುಪಿದ ಘಟನೆಗಳ ಬಗ್ಗೆ ವಿಚಾರಣೆ ನಡೆಸಲು ನೇಮಿಸಿದ್ದ ಅಪ್ಪಚ್ಚು ರಂಜನ್ ನೇತೃತ್ವದ ಸಮಿತಿ, ಅಹಿತಕರ ಘಟನೆಗೆ ಕಾರಣರಾದ ಎಂಟು ಶಾಸಕರನ್ನು ಒಂದು ವರ್ಷದ ಮಟ್ಟಿಗೆ ಅಮಾನತು ಹಾಗೂ ಏಳು ಮಂದಿ ಶಾಸಕರನ್ನು ಆರು ತಿಂಗಳ ಕಾಲ ಅಮಾನತು ಮಾಡಬೇಕೆಂದು ಶಿಫಾರಸು ಮಾಡಿದೆ.
ಕಾಂಗ್ರೆಸ್ ಪಕ್ಷದ ರಹೀಂಖಾನ್, ಎನ್.ಎ.ಹ್ಯಾರಿಸ್, ಯು.ಟಿ.ಖಾದರ್, ಪಾಂಡುರಂಗ ಪಾಟೀಲ್, ಜೆಡಿಎಸ್‌ನ ಜಮೀರ್ ಅಹ್ಮದ್ ಖಾನ್, ಹೆಚ್.ಸಿ.ಬಾಲಕೃಷ್ಣ, ಪಿ.ಎಸ್.ಪುಟ್ಟರಾಜು ಹಾಗೂ ಎಂ.ಟಿ.ಕೃಷ್ಣಪ್ಪ ಅವರನ್ನು ಶಾಸನಸಭೆಯ ಸದಸ್ಯತ್ವದಿಂದ ಒಂದು ವರ್ಷ ಕಾಲ ಅಮಾನತುಗೊಳಿಸುವಂತೆ ಸಮಿತಿ ತನ್ನ ವರದಿಯಲ್ಲಿ ತಿಳಿಸಿದೆ.
ಇನ್ನುಳಿದಂತೆ ಶಾಸಕರಾದ ಜಿ.ಕೆ.ಸಂಗಮೇಶ್, ಬಂಡೆಪ್ಪ ಕಾಶಂಪೂರ್, ಸುರೇಶ್ ಗೌಡ, ಎಚ್.ಪಿ.ಮಂಜುನಾಥ್, ಕೆ.ರಾಜು, ಕೆ.ಪಿ.ಬಚ್ಚೇಗೌಡ, ಪಿ.ಎಂ.ಅಶೋಕ್ ಅವರನ್ನು ಶಾಸನಸಭೆಯ ಸದಸ್ಯತ್ವವನ್ನು ಕನಿಷ್ಟ 6 ತಿಂಗಳ ಕಾಲಾವಧಿಗೆ ಅಮಾನತುಗೊಳಿಸಲು ಶಿಫಾರಸು ಮಾಡಲಾಗಿದೆ.
ಕಾಂಗ್ರೆಸ್ ಹಾಗೂ ಜೆಡಿಎಸ್‌ನ 15 ಮಂದಿ ಶಾಸಕರಿಗೆ ಯಾವುದೇ ಸವಲತ್ತುಗಳನ್ನು ಪಡೆಯಲು ಅನರ್ಹಗೊಳಿಸಬಹುದು ಹಾಗೂ ಅಮಾನತಿನ ಅವಧಿಯಲ್ಲಿ ವಿಧಾನಸಭೆ ಹಾಗೂ ಶಾಸಕರ ಭವನ ಪ್ರವೇಶವನ್ನು ನಿರ್ಬಂಧಿಸಬಹುದಾಗಿದೆ ಎಂದು ವರದಿಯಲ್ಲಿ ತಿಳಿಸಿದೆ.
ಸದನದ ಸದಸ್ಯರ ಭದ್ರತೆಗೆ, ಘನತೆಗೆ ಮತ್ತು ಗೌರವಕ್ಕೆ ಧಕ್ಕೆಯಾಗದಂತೆ ಕಾರ್ಯನಿರ್ವಹಿಸಲು ಸೂಕ್ತ ಭದ್ರತೆ ಒದಗಿಸಲು ಪೊಲೀಸ್ ಇಲಾಖೆಗೆ ಸೂಕ್ತ ನಿರ್ದೇಶನ ನೀಡಬೇಕು. ಸದನದ ಕಲಾಪವನ್ನು ಸರಿಯಾಗಿ ಚಿತ್ರಿಸದೆ ಕರ್ತವ್ಯ ಲೋಪ ಎಸಗಿದ ಸಿಬ್ಬಂದಿಗಳು, ಸಿಸಿಟಿವಿ ಸಿಬ್ಬಂದಿ ಮೇಲೆ ಇಲಾಖಾ ಕ್ರಮ ಜರುಗಿಸಲು ವಾರ್ತಾ ಇಲಾಖೆಗೆ ಶಿಫಾರಸು ಮಾಡಬೇಕು. ಪ್ರಜಾತಂತ್ರ ವ್ಯವಸ್ಥೆಯನ್ನು ಎತ್ತಿ ಹಿಡಿಯುವ ಉದ್ದೇಶದಿಂದ ಈ ಶಿಫಾರಸಿನಂತೆ ಅಗತ್ಯಕ್ರಮ ಜರುಗಿಸಲು ಸಭಾಧ್ಯಕ್ಷ ಕೆ.ಜಿ.ಬೋಪಯ್ಯ ತೀರ್ಮಾನ ಕೈಗೊಳ್ಳಬೇಕೆಂದು ಸಮಿತಿ ಅಭಿಪ್ರಾಯವ್ಯಕ್ತಪಡಿಸಿದೆ.
ಹೇಮಚಂದ್ರಸಾಗರ್ ಸಮಿತಿ ಶಿಫಾರಸು: ವಿಧಾನಸಭಾಧ್ಯಕ್ಷರ ಚುನಾವಣೆ ಸಂದರ್ಭದಲ್ಲಿ ಅನುಚಿತವಾಗಿ ವರ್ತಿಸಿದ ನಾಲ್ಕು ಮಂದಿ ಕಾಂಗ್ರೆಸ್ ಮತ್ತು ಜೆಡಿಎಸ್ ಶಾಸಕರನ್ನು ಮುಂದಿನ ವಿಧಾನಸಭಾ ಚುನಾವಣಾ ಅವಧಿವರೆಗೆ ಅಮಾನತು ಮಾಡುವಂತೆ ಶಾಸಕ ಡಾ.ಹೇಮಚಂದ್ರ ಸಾಗರ್ ನೇತೃತ್ವದ ವಿಶೇಷ ಸದನ ಸಮಿತಿ ಸದನಕ್ಕೆ ಶಿಫಾರಸು ಮಾಡಿದೆ.
ಜಮೀರ್ ಅಹ್ಮದ್ ಖಾನ್, ಕಾಕಾ ಸಾಹೇಬ್ ಪಾಟೀಲ್, ರಹೀಮ್ ಖಾನ್ ಹಾಗೂ ಬಾಲಕೃಷ್ಣ ಅವರನ್ನು ಅಮಾನತು ಮಾಡುವಂತೆ ಸಮಿತಿ ಶಿಫಾರಸು ಮಾಡಿದೆ. ಈ ವರದಿಯನ್ನು ಇಂದು ಸದನದಲ್ಲಿ ಮಂಡಿಸಲಾಗಿತ್ತು.
ವಿಧಾನಸಭೆ ಕಲಾಪ ಅನಿರ್ದಿಷ್ಟಾವಧಿಗೆ ಮುಂದಕ್ಕೆ: ಕಾಂಗ್ರೆಸ್-ಜೆಡಿಎಸ್ ಸದಸ್ಯರ ತೀವ್ರ ಪ್ರತಿಭಟನೆ, ಗದ್ದಲದಿಂದಾಗಿ ವಿಧಾನಸಭೆ ಕಲಾಪ ಆರನೇ ದಿನಕ್ಕೆ ಮೊಟಕುಗೊಂಡಂತಾಗಿದೆ. ಗುರುವಾರದ ಕಲಾಪದ ವೇಳೆಯಲ್ಲಿಯೂ ಪ್ರತಿಪಕ್ಷಗಳು ಸದನದ ಬಾವಿಗಿಳಿದು ಪ್ರತಿಭಟನೆ ನಡೆಸಿ, ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ರಾಜೀನಾಮೆ ನೀಡಬೇಕೆಂದು ಪಟ್ಟು ಹಿಡಿದು, ನಂತರ ಸಭಾತ್ಯಾಗ ಮಾಡಿದ್ದವು. ಅಂತೂ ಸ್ಪೀಕರ್ ಕೆ.ಜಿ.ಬೋಪಯ್ಯ ಅವರು ವಿಧಾನಸಭೆ ಕಲಾಪವನ್ನು ಅನಿರ್ದಿಷ್ಟಾವಧಿವರೆಗೆ ಮುಂದೂಡಿರುವುದಾಗಿ ಘೋಷಿಸಿದರು.
ಒಟ್ಟು 11ದಿನದ ಕಲಾಪ ನಿಗದಿಯಾಗಿತ್ತು. ಆದರೆ ಸದನದ ಕಲಾಪ ಆರಂಭವಾದ ದಿನದಿಂದಲೂ ಪ್ರತಿಪಕ್ಷಗಳ ಗದ್ದಲ, ಬಹಿಷ್ಕಾರದ ಹಿನ್ನೆಲೆಯಲ್ಲಿ ಯಾವುದೇ ಮಹತ್ವದ ಚರ್ಚೆ ನಡೆಯದೇ ಕಲಾಪ ಗದ್ದಲಕ್ಕೆ ಬಲಿಯಾದಂತಾಗಿದೆ. ಇಂದು ಮಧ್ಯಾಹ್ನ ಮೂರು ಗಂಟೆಗೆ ಮುಂದೂಡಲ್ಪಟ್ಟ ವಿಧಾನಸಭೆ ಕಲಾಪ ಕೊನೆಗೂ ಸುಗಮವಾಗಿ ನಡೆಯದೆ ಅನಿರ್ದಿಷ್ಟಾವಧಿವರೆಗೆ ಮುಂದೂಡಲಾಯಿತು.