ರಾಜ್ಯದಲ್ಲಿ 1995ರಿಂದ 2010ರವರೆಗೆ ನಡೆದಿದೆ ಎನ್ನಲಾಗಿರುವ ಎಲ್ಲಾ ಭೂ ಹಗರಣಗಳ ವಿಚಾರಣೆಗಾಗಿ ನಿವೃತ್ತ ನ್ಯಾಯಮೂರ್ತಿ ಪದ್ಮರಾಜ್ ಆಯೋಗವನ್ನು ನೇಮಕ ಮಾಡಲಾಗಿದ್ದು ಆಯೋಗದ ಕಾರ್ಯನಿರ್ವಹಣೆಯಲ್ಲಿ ಸರಕಾರ ಮಧ್ಯಪ್ರವೇಶ ಮಾಡುವುದಿಲ್ಲ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಸ್ಪಷ್ಟಪಡಿಸಿದ್ದಾರೆ.
ಭೂ ಹಗರಣಗಳ ತನಿಖೆಗಾಗಿ ಪದ್ಮರಾಜ್ ಆಯೋಗ ಸಿಬಿಐ ನೆರವು ಕೋರಿರುವ ಬಗ್ಗೆ ಪ್ರತಿಕ್ರಿಯೆ ನೀಡಿದ ಅವರು, ಈ ಕುರಿತು ನಾನೇನೂ ಹೇಳುವುದಿಲ್ಲ. ಆಯೋಗ ತನ್ನ ಕೆಲಸ ತಾನು ಮಾಡಿಕೊಂಡು ಹೋಗುತ್ತದೆ. ಹಾಗಾಗಿ ಸರಕಾರ ಯಾವುದೇ ವಿಧದಲ್ಲೂ ಹಸ್ತಕ್ಷೇಪ ಮಾಡುವುದಿಲ್ಲ ಎಂದರು.
ಏತನ್ಮಧ್ಯೆ ಭೂ ಹಗರಣಗಳ ತನಿಖೆಗಾಗಿ ಸಿಬಿಐ ಸಹಕಾರ ಕೋರಿ ನ್ಯಾ.ಪದ್ಮರಾಜ್ ಆಯೋಗ ಕೇಂದ್ರ ಸರಕಾರಕ್ಕೆ ಪತ್ರ ಬರೆದಿರುವುದು ಕೇವಲ ಕಣ್ಣೊರೆಸುವ ತಂತ್ರ ಹಾಗೂ ಜನರ ಗಮನವನ್ನು ಬೇರೆಡೆಗೆ ತಿರುಗಿಸುವ ಚಾಣಾಕ್ಷ ತಂತ್ರ ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಆರೋಪಿಸಿದ್ದಾರೆ.
ನಾವು ಆರಂಭದಿಂದಲೂ ಎಲ್ಲಾ ಭೂ ಹಗರಣ ಪ್ರಕರಣಗಳನ್ನು ಸಿಬಿಐ ತನಿಖೆಗೆ ವಹಿಸಬೇಕೆಂದು ಒತ್ತಾಯ ಮಾಡುತ್ತಲೇ ಬಂದಿದ್ದೇವೆ. ಯಾಕೆಂದರೆ ಆಯೋಗ ಮುಖ್ಯಮಂತ್ರಿಯನ್ನು ತನಿಖೆಗೆ ಒಳಪಡಿಸುವುದಿಲ್ಲ. ದಾಖಲೆ ಪರಿಶೀಲಿಸಿ ವರದಿ ಕೊಡಲಿದೆ. ಆದ್ದರಿಂದ ಈ ಪತ್ರಕ್ಕೆಹಾಗೂ ಆಯೋಗದ ಕ್ರಮಕ್ಕೆ ಯಾವುದೇ ಮಹತ್ವ ಕೊಡಬೇಕಾಗಿಲ್ಲ ಎಂದರು.