ವಿಶ್ವಾಸಮತ ಯಾಚನೆ ವೇಳೆ ಗದ್ದಲ ಎಬ್ಬಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ 15 ಮಂದಿ ಶಾಸಕರ ಅಮಾನತು ಕುರಿತಂತೆ ನಿರ್ಣಯವನ್ನು ವಿಧಾನಸಭೆಯಲ್ಲಿ ಮಂಡಿಸಲು ಸಂಸದೀಯ ವ್ಯವಹಾರಗಳ ಸಚಿವ ಸುರೇಶ್ ಕುಮಾರ್ ತೀವ್ರ ವಿರೋಧ ವ್ಯಕ್ತಪಡಿಸಿ ಸಚಿವ ಸ್ಥಾನಕ್ಕೆ ರಾಜೀನಾಮೆ ಕೊಡಲು ಮುಂದಾದ ಘಟನೆ ನಡೆಯಿತು.
'ಶಾಸಕರನ್ನು ಅಮಾನತು ಮಾಡುವುದು ಸರಿಯಲ್ಲ. ಹಾಗಾಗಿ ನನ್ನಿಂದ ಈ ನಿರ್ಣಯ ಮಂಡಿಸಲು ಸಾಧ್ಯವಿಲ್ಲ. ಒಂದು ವೇಳೆ ನಾನೇ ನಿರ್ಣಯ ಮಂಡಿಸಬೇಕೆಂದು ಹೇಳುವುದಾದರೆ ನನ್ನ ರಾಜೀನಾಮೆ ಪಡೆಯಿರಿ. ಸದನ ಸಮಿತಿ ನೀಡುವ ವರದಿಯ ನಿರ್ಣಯವನ್ನು ಸಂಸದೀಯ ವ್ಯವಹಾರಗಳ ಸಚಿವರೇ ಸದನದಲ್ಲಿ ಮಂಡಿಸಬೇಕು. ಇದು ನಿಯಮ. ಸದಸ್ಯರನ್ನು ಹೊರ ಹಾಕುವುದು ವೈಯಕ್ತಿಕವಾಗಿ ನನಗೆ ಇಷ್ಟ ಇಲ್ಲ ಎಂದು ಸದನದ ಕಲಾಪ ಆರಂಭಕ್ಕೂ ಮುನ್ನ ಸುರೇಶ್ ಕುಮಾರ್ ಅಸಮಾಧಾನ ವ್ಯಕ್ತಪಡಿಸಿದ್ದಾರೆನ್ನಲಾಗಿದೆ.
ಏತನ್ಮಧ್ಯೆ ಮುಖ್ಯ ಸಚೇತಕ ಡಿ.ಎನ್.ಜೀವರಾಜ್ ಅವರು ಸುರೇಶ್ ಕುಮಾರ್ ಅವರನ್ನು ಭೇಟಿ ಮಾಡಿ ಮನವೊಲಿಸುವ ಪ್ರಯತ್ನ ಮಾಡಿದರು. ಇವರ ಜತೆಗೆ ಅಧಿಕಾರಿಗಳು ಕೂಡ ಸೇರಿ ಸಚಿವರನ್ನು ಸಮಾಧಾನಪಡಿಸಿದರು ಎನ್ನಲಾಗಿದೆ.
ಅಂತೂ ಒತ್ತಡಕ್ಕೆ ಮಣಿದ ಸುರೇಶ್ ಕುಮಾರ್ ಅವರು ಮಧ್ಯಾಹ್ನ ಸದನಕ್ಕೆ ಆಗಮಿಸಿದ ಅವರು ಅಪ್ಪಚ್ಚು ರಂಜನ್ ಮಂಡಿಸಿದ ವರದಿಗೆ ಸಂಬಂಧಿಸಿದ ನಿರ್ಣಯವನ್ನು ಮಂಡಿಸಿದರು. ಸದನದಿಂದ ಹೊರಬಂದ ನಂತರ ಅವರು ಸುದ್ದಿಗಾರರ ಜತೆ ಮಾತನಾಡಲು ನಿರಾಕರಿಸಿದರು.