ಚಿಕ್ಕನಾಯಕನಹಳ್ಳಿ , ಶುಕ್ರವಾರ, 14 ಜನವರಿ 2011( 16:21 IST )
ದೇಶ ಹಾಗೂ ರಾಜ್ಯರಾಜಕಾರಣ ರಾಜಕೀಯ ಲೂಟಿಕೋರರ ಸಂತೆಯಾಗಿದೆ ಎಂದು ಜೆಡಿಯು ರಾಷ್ಟ್ರಾಧ್ಯಕ್ಷ ಹಾಗೂ ಎನ್‌ಡಿಎ ಸಂಚಾಲಕ ಶರದ್ ಯಾದವ್ ವಿಷಾದಿಸಿದರು.
ಪಟ್ಟಣದ ನವೋದಯ ಪ್ರಥಮ ದರ್ಜೆ ಕಾಲೇಜಿನಲ್ಲಿ ಸಂಯುಕ್ತ ಜನತಾದಳ ತಾಲೂಕು ಘಟಕದಿಂದ ಹಮ್ಮಿಕೊಂಡಿದ್ದ ಪಕ್ಷದ ನೂತನ ಜಿ.ಪಂ., ತಾ.ಪಂ. ಸದಸ್ಯರು, ಚುನಾವಣಾ ಕಣಕ್ಕಿಳಿದಿದ್ದ ಅಭ್ಯರ್ಥಿಗಳು ಹಾಗೂ ಪಕ್ಷದ ಮುಖಂಡರು, ಕಾರ್ಯಕರ್ತರ ಅಭಿನಂದನಾ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಕರ್ನಾಟಕದ ರಾಜಕಾರಣ ಒಂದು ಕಾಲದಲ್ಲಿ ದೇಶಕ್ಕೆ ಮಾದರಿಯಾಗಿತ್ತು. ನೀತಿ, ಸಿದ್ದಾಂತದ ಮೇಲೆ ದಿವಂಗತ ರಾಮಕೃಷ್ಣ ಹೆಗಡೆ, ಎಸ್.ಆರ್. ಬೊಮ್ಮಾಯಿ, ಜೆ.ಎಚ್. ಪಟೇಲ್, ನಜೀರ್ ಸಾಹೇಬ್ ಅವರಂತಹ ಮುತ್ಸದ್ದಿ ನಾಯಕರು ಆಡಳಿತ ಚುಕ್ಕಾಣಿ ಹಿಡಿದು ಜನಮೆಚ್ಚುಗೆಯ ಆಡಳಿತ ನಡೆಸಿದ್ದರು ಎಂದರು.
ಪ್ರಸ್ತುತ ರಾಜ್ಯ, ಕೇಂದ್ರ ಸರಕಾರ ಭ್ರಷ್ಟಾಚಾರ, ಹಗರಣಗಳ ಸುಳಿಗಳಲ್ಲಿ ಸಿಲುಕಿ ಜನವಿರೋಧಿ ಆಡಳಿತ ನಡೆಸುತ್ತಿದೆ. ಕರ್ನಾಟಕದಲ್ಲಿ ವಿಧಾನಸಭೆ ಉಪ ಚುನಾವಣೆಯಲ್ಲಿ ಕ್ಷೇತ್ರವೊಂದಕ್ಕೆ 20ರಿಂದ 50 ಕೋಟಿ ರೂ.ಗಳನ್ನು ಆಡಳಿತ ಪಕ್ಷ ಖರ್ಚು ಮಾಡಿದೆ ಎಂದು ಜನಸಾಮಾನ್ಯರೇ ಮಾತಾಡಿಕೊಳ್ಳುತ್ತಿದ್ದು, ನೀತಿ ಸಿದ್ದಾಂತ, ಪ್ರಜಾಪ್ರಭುತ್ವ ತತ್ವಗಳನ್ನು ಗಾಳಿಗೆ ತೂರಲಾಗಿದೆ ಎಂದು ಟೀಕಿಸಿದರು.
ಪ್ರಜಾಪ್ರಭುತ್ವ ಭಾರತದಲ್ಲಿ ಪ್ರಜೆಗಳೇ ತಮ್ಮ ಪ್ರತಿನಿಗಳನ್ನು ಸ್ವತಂತ್ರವಾಗಿ ಆಯ್ಕೆ ಮಾಡಿಕೊಳ್ಳಲಾಗದ ಪರಿಸ್ಥಿತಿ ಉದ್ಬವಿಸಿದೆ. ಹಣ ನೀಡಿ ಮತದಾರರನ್ನು ಕೊಂಡುಕೊಳ್ಳುವುದು, ಗೆದ್ದ ಮೇಲೆ ಹಣ ಲೂಟಿ ಮಾಡುವ ಪ್ರವೃತ್ತಿ ಹೆಚ್ಚಾಗಿದೆ ಎಂದರು.