ಮಾಜಿ ಪ್ರಧಾನ ಮಂತ್ರಿ ಎಚ್.ಡಿ. ದೇವೇಗೌಡ ಹಾಗೂ ವಿಧಾನಸಭೆಯ ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಪರಸ್ಪರ ಭೇಟಿಯಾಗಿ ಮಾತುಕತೆ ನಡೆಸಿದ್ದು, ರಾಜಕೀಯ ವಲಯದಲ್ಲಿ ತೀವ್ರ ಕುತೂಹಲಕ್ಕೆ ಕಾರಣವಾಗಿದೆ.
ಜೆಡಿಎಸ್ ಬಿಟ್ಟ ನಂತರ ಹಾವು-ಮುಂಗುಸಿಯಂತಿದ್ದ ಈ ಮಾಜಿ ಗುರು-ಶಿಷ್ಯರ ಭೇಟಿ ನಡೆದಿರುವುದು ಬೆಂಗಳೂರಿನ ಮಲ್ಲಿಗೆ ಆಸ್ಪತ್ರೆಯಲ್ಲಿ. ಸಿದ್ದರಾಮಯ್ಯನವರ ಅತ್ತೆಯವರು ಅನಾರೋಗ್ಯದಿಂದಾಗಿ ಇಲ್ಲಿ ದಾಖಲಾಗಿದ್ದರು. ಅವರನ್ನು ನೋಡಲೆಂದು ಸಿದ್ದರಾಮಯ್ಯ ಆಸ್ಪತ್ರೆಗೆ ಬಂದಿದ್ದರು.
ಇದೇ ಸಂದರ್ಭದಲ್ಲಿ ಅಲ್ಲೇ ಪಕ್ಕದ ಖಾಸಗಿ ಹೊಟೇಲಿನಲ್ಲಿ ಪಕ್ಷದ ಕಾರ್ಯಕ್ರಮಕ್ಕಾಗಿ ಜೆಡಿಎಸ್ ವರಿಷ್ಠ ದೇವೇಗೌಡರು ಬಂದಿದ್ದರು. ಸಮೀಪದಲ್ಲೇ ಸಿದ್ದರಾಮಯ್ಯ ಇರುವುದು ಗಮನಕ್ಕೆ ಬಂದ ಮೇಲೆ, ನೇರವಾಗಿ ಹೋಗಿ ಮಾತನಾಡಿಸಿದರು. ಕೆಲ ಹೊತ್ತು ಅಲ್ಲಿದ್ದು, ನಂತರ ಗೌಡರು ನಿರ್ಗಮಿಸಿದರು.
ಎರಡು ದಿನಗಳ ಹಿಂದಷ್ಟೇ ಉಭಯ ನಾಯಕರು ದೂರವಾಣಿ ಮೂಲಕ ಮಾತುಕತೆ ನಡೆಸಿದ್ದರು. ಈಗ ಭೇಟಿಯಾಗಿದ್ದಾರೆ. ಬಿಜೆಪಿ ಸರಕಾರದ ವಿರುದ್ಧ ಎರಡನೇ ಸುತ್ತಿನ ಮಸಲತ್ತು ಏನಾದರೂ ನಡೆಯುತ್ತಿದೆಯೇ ಎಂದು ಪ್ರಶ್ನಿಸಿದರೆ, ಹಾಗೇನಿಲ್ಲ. ಈ ಭೇಟಿಗೆ ಮಹತ್ವ ನೀಡಬೇಕಾಗಿಲ್ಲ ಎಂದು ಕಾಂಗ್ರೆಸ್ ಮತ್ತು ಜೆಡಿಎಸ್‌ಗಳು ಹೇಳಿಕೊಂಡಿವೆ.
ಈ ನಡುವೆ ಸಿದ್ದರಾಮಯ್ಯ ಮತ್ತು ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಕೂಡ ಮಾತುಕತೆ ನಡೆಸಿರುವುದು ವರದಿಯಾಗಿದೆ. ಗುರುವಾರ ರಾತ್ರಿ ಈ ಇಬ್ಬರೂ ನಾಯಕರು ಫೋನ್ ಮೂಲಕ ಮಾತನಾಡಿದ್ದಾರೆ.
ಸಿದ್ದರಾಮಯ್ಯ, ಕುಮಾರಸ್ವಾಮಿ, ದೇವೇಗೌಡರು ಪ್ರತ್ಯೇಕವಾಗಿ ಹೋಗಿ ರಾಜ್ಯಪಾಲ ಹಂಸರಾಜ್ ಭಾರದ್ವಾಜ್ ಅವರನ್ನು ಭೇಟಿಯಾಗಿ ಸಮಾಲೋಚನೆ ನಡೆಸಿದ್ದಾರೆ. ತಾ.ಪಂ., ಜಿ.ಪಂ. ಚುನಾವಣೆ ಬಳಿಕ ಪ್ರತಿಪಕ್ಷಗಳು ವಿಧಾನ ಮಂಡಲ ಅಧಿವೇಶನದಲ್ಲೂ ಒಂದಾಗಿರುವುದು ಮತ್ತು ರಾಜ್ಯಪಾಲರಲ್ಲಿಗೆ ಪದೇ ಪದೇ ಹೋಗುತ್ತಿರುವುದು ಆಡಳಿತ ಪಕ್ಷಕ್ಕೆ ತೀವ್ರ ತಲೆ ನೋವು ತಂದಿದೆ.