ಹದಿನೈದು ಶಾಸಕರನ್ನು ಅಮಾನತು ಮಾಡಿದರೆ ಪ್ರತಿಪಕ್ಷದ ಎಲ್ಲಾ ಶಾಸಕರು ರಾಜೀನಾಮೆ ನೀಡುತ್ತೇವೆ ಎಂದು ಸಿದ್ದರಾಮಯ್ಯ ಬೆದರಿಕೆ ಹಾಕಿರುವುದಕ್ಕೆ ಪ್ರತಿಕ್ರಿಯೆ ನೀಡಿರುವ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ, ಅದಕ್ಕೂ ನನಗೂ ಸಂಬಂಧವಿಲ್ಲ; ಸ್ಪೀಕರ್ ಅಧಿಕಾರದಲ್ಲಿ ನಾನು ಮಧ್ಯಪ್ರವೇಶ ಮಾಡುವುದಿಲ್ಲ ಎಂದರು.
ಶಿವಮೊಗ್ಗದಲ್ಲಿ ಸುದ್ದಿಗಾರರೊಂದಿಗೆ ಮಾತನಾಡುತ್ತಿದ್ದ ಅವರು, ಅಪ್ಪಚ್ಚು ರಂಜನ್ ನೇತೃತ್ವದ ಸದನ ಸಮಿತಿ ವರದಿ ಶಿಫಾರಸ್ಸಿನ ಅನ್ವಯ ಕ್ರಮ ಕೈಗೊಳ್ಳುವ ಅಧಿಕಾರ ಸ್ಪೀಕರ್ ಕೆ.ಜಿ. ಬೋಪಯ್ಯ ಅವರಿಗೆ ಬಿಟ್ಟದ್ದು. ಅವರಿಗೆ ಈ ಕುರಿತು ಸಂಪೂರ್ಣ ಅಧಿಕಾರವಿದೆ. ಅವರ ನಿರ್ಧಾರಕ್ಕೂ ನಮಗೂ ಯಾವುದೇ ಸಂಬಂಧವಿಲ್ಲ ಎಂದರು.
ವಿಧಾನಸಭೆಯಲ್ಲಿ ವಿಶ್ವಾಸಮತ ಯಾಚನೆ ವೇಳೆ ಅಶಿಸ್ತು ತೋರಿದ್ದಾರೆಂಬ ಆರೋಪದಲ್ಲಿ 15 ಮಂದಿ ಶಾಸಕರನ್ನು ಅಮಾನತು ಮಾಡಿದರೆ ವಿರೋಧ ಪಕ್ಷದ ಎಲ್ಲ ಶಾಸಕರು ಸಾಮೂಹಿಕ ರಾಜೀನಾಮೆ ನೀಡಲಿದ್ದಾರೆ ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಶುಕ್ರವಾರ ಎಚ್ಚರಿಕೆ ನೀಡಿದ್ದರು.
ಯಾವುದೇ ಶಾಸಕರನ್ನು ಅಶಿಸ್ತು ಎಂದು ಹೇಳಿ ಈ ರೀತಿ ಅಮಾನತು ಮಾಡಲು ಬರುವುದಿಲ್ಲ. ಅಮಾನತಿಗೆ ಮುಂದಾದರೆ ಪರಿಣಾಮವನ್ನು ಎದುರಿಸಬೇಕಾಗುತ್ತದೆ. ಒಂದು ವರ್ಷ, ಆರು ತಿಂಗಳು ಅಮಾನತು ಮಾಡಲು ಸಾಧ್ಯವೇ ಇಲ್ಲ ಕಾಂಗ್ರೆಸ್ ನಾಯಕ ವಾದಿಸಿದ್ದರು.
ಇದೇ ಸಂದರ್ಭದಲ್ಲಿ ಜೆಡಿಎಸ್ ನಾಯಕರಾದ ಅಪ್ಪ-ಮಗ, ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ ಮತ್ತು ಎಚ್.ಡಿ. ಕುಮಾರಸ್ವಾಮಿ ವಿರುದ್ಧ ವಾಗ್ದಾಳಿ ನಡೆಸಿದ ಯಡಿಯೂರಪ್ಪ, ಅವರ ಕಾಲದಲ್ಲಿನ ಅವ್ಯವಹಾರಗಳ ಬಗ್ಗೆ ಸ್ಪೀಕರ್ ಅವರಿಗೆ ದೂರು ನೀಡುವುದಾಗಿ ಹೇಳಿದರು.