ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ, ಪುತ್ರ ಎಚ್.ಡಿ.ಕುಮಾರಸ್ವಾಮಿ ಹಾಗೂ ಅವರ ಕುಟುಂಬ ನಡೆಸಿರುವ ಅವ್ಯವಹಾರ, ಅಕ್ರಮ ಆಸ್ತಿಗಳ ಸಮಗ್ರ ಮಾಹಿತಿಗಳನ್ನು ಬಿಡುಗಡೆ ಮಾಡಲಾಗುವುದು ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಘೋಷಿಸುವ ಮೂಲಕ ಗೌಡರ ಕುಟುಂಬದ ವಿರುದ್ಧದ ಸಮರ ಮುಂದುವರಿಸಿದ್ದಾರೆ.
ಕುಮಾರಸ್ವಾಮಿ ಆಡಳಿತದ ಸಂದರ್ಭದಲ್ಲಿ ಮೈಸೂರು ನಗರದಲ್ಲಿ ಮಾಡಿರುವ ಡಿನೋಟಿಫೈ ಕುರಿತು ಪತ್ರಿಕೆಗಳಲ್ಲಿ ತಮ್ಮ ಪಕ್ಷ ಜಾಹೀರಾತು ನೀಡಿತ್ತು. ಆದರೆ ಕುಮಾರಸ್ವಾಮಿ ಈವರೆಗೂ ಯಾವುದೇ ಪ್ರತಿಕ್ರಿಯೆ ನೀಡಿಲ್ಲ ಎಂದು ಸುದ್ದಿಗಾರರ ಜತೆ ಮಾತನಾಡುತ್ತ ಆರೋಪಿಸಿದರು.
ಎಚ್‌ಡಿಕೆ ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ 62 ಡಿನೋಟಿಫಿಕೇಷನ್ ಆಗಿದ್ದ ಭೂಮಿಯನ್ನು ಡಿನೋಟಿಫೈ ಮಾಡಿದ್ದಾರೆ. ಧರಂಸಿಂಗ್ ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ಕೆಎಂಎಫ್ ಅಧ್ಯಕ್ಷರಾಗಿದ್ದ ಎಚ್.ಡಿ.ರೇವಣ್ಣ 38 ಕೋಟಿ ರೂ.ಹಣ ದುರುಪಯೋಗ ಮಾಡಿಕೊಂಡಿದ್ದು ಸಾಬೀತಾಗಿದೆ. ಆದರೂ ಅವರ ವಿರುದ್ಧ ಯಾವುದೇ ಕ್ರಮ ಕೈಗೊಳ್ಳದೆ ರಕ್ಷಣೆ ಮಾಡಿದ್ದಾರೆ. ಆ ನಿಟ್ಟಿನಲ್ಲಿ ಗೌಡರ ಕುಟುಂಬದ ಸಮಗ್ರ ಅವ್ಯವಹಾರದ ದಾಖಲೆ ಬಿಡುಗಡೆ ಮಾಡುವುದಾಗಿ ಹೇಳಿದರು.
ಇಷ್ಟೆಲ್ಲ ಅವ್ಯವಹಾರ, ಅಕ್ರಮ ನಡೆಸಿರುವ ಗೌಡರು ಮತ್ತು ಎಚ್.ಡಿ.ಕುಮಾರಸ್ವಾಮಿ ಯಾವ ಮುಖ ಹೊತ್ತು ರಾಜಭವನದ ಮುಂಭಾಗ ಧರಣಿ, ಭೇಟಿ ಮಾಡುತ್ತಾರೋ ಗೊತ್ತಿಲ್ಲ. ಅವರಿಗೆ ಬೆಂಬಲ ನೀಡುತ್ತಿರುವ ರಾಷ್ಟ್ರೀಯ ಪಕ್ಷವಾಗಿರುವ ಕಾಂಗ್ರೆಸ್ ಪಕ್ಷಕ್ಕೆ ಏನಾಗಿದೆ ಎಂದು ಈ ಸಂದರ್ಭದಲ್ಲಿ ಪ್ರಶ್ನಿಸಿದರು.