ನಗರದ ಬನಶಂಕರಿ ವಾರ್ಡ್ ಜೆಡಿಎಸ್ ಕಾರ್ಪೋರೇಟರ್ ದಿವಾನ್ ಅಲಿಯನ್ನು ಭಾನುವಾರ ಹಾಡಹಗಲೇ ಅಪರಿಚಿತ ದುಷ್ಕರ್ಮಿಗಳು ಗುಂಡಿಕ್ಕಿ ಹತ್ಯೆಗೈದಿರುವ ಘಟನೆ ನಡೆದಿದೆ.
ಬಿಬಿಎಂಪಿಯಲ್ಲಿ ಜೆಡಿಎಸ್ ಕಾರ್ಪೋರೇಟರ್ ಆಗಿದ್ದ ದಿವಾನ್ ಅಲಿಯನ್ನು ಇಂದು ಬೆಳಿಗ್ಗೆ ಬನಶಂಕರಿಯ ಮೊನೋಟೈಪ್ ಬಳಿ ಬೈಕ್‌ನಲ್ಲಿ ಆಗಮಿಸಿದ್ದ ದುಷ್ಕರ್ಮಿಗಳು ಗುಂಡಿಕ್ಕಿ ಹತ್ಯೆ ಮಾಡಿದ್ದರು. ಅಲಿ ಸ್ಥಳದಲ್ಲೇ ಸಾವನ್ನಪ್ಪಿದ್ದ, ಈ ಸಂದರ್ಭದಲ್ಲಿ ಅಲಿಯ ಇಬ್ಬರು ಸಹಚರರಿಗೆ ಗಾಯಗಳಾಗಿವೆ.
ದಿವಾನ್ ಅಲಿಯನ್ನು ಸುಧಾಮನಗರದ ಮಾಜಿ ರೌಡಿ ಮಾಹೀಂ ಗುಂಪು ಈ ಹತ್ಯೆ ನಡೆಸಿರಬಹುದು ಎಂದು ಶಂಕಿಸಲಾಗಿದೆ. ಅಲಿಯ ಮೃತ ದೇಹವನ್ನು ಸಾಗರ್ ಆಸ್ಪತ್ರೆಗೆ ರವಾನಿಸಲಾಗಿದೆ.
ದಿವಾನ್ ಅಲಿ ಕಳೆದ ಬಿಬಿಎಂಪಿ ಚುನಾವಣೆಯಲ್ಲಿ ಬನಶಂಕರಿಯ 180ನೇ ವಾರ್ಡ್‌ನಲ್ಲಿ ಜೆಡಿಎಸ್ ಪಕ್ಷದಿಂದ ಟಿಕೆಟ್ ಗಿಟ್ಟಿಸಿಕೊಂಡು ಸ್ಪರ್ಧಿಸಿ, ಗೆಲವು ಸಾಧಿಸಿದ್ದ. ತನ್ನ ಜೀವಕ್ಕೆ ಅಪಾಯ ಇದೆ, ತಾನು ರೌಡಿಸಂ ಬಿಟ್ಟಿದ್ದು, ತನ್ನ ಮಕ್ಕಳಿಗಾಗಿ ಬದುಕಬೇಕು, ಹಾಗಾಗಿ ತನಗೆ ರಕ್ಷಣೆ ನೀಡಿ ಎಂದು ಪೊಲೀಸರಿಗೆ ಮನವಿ ಮಾಡಿಕೊಂಡಿದ್ದ ಎನ್ನಲಾಗಿದೆ.
ದಿವಾನ್ ಅಲಿ ಮೇಲೆ ದರೋಡೆ,ಕೊಲೆ, ಕೊಲೆ ಯತ್ನ ಸೇರಿದಂತೆ ಸುಮಾರು 27 ಪ್ರಕರಣಗಳು ದಾಖಲಾಗಿವೆ ಎನ್ನಲಾಗಿದೆ. ಭೂಗತ ರೌಡಿ ತನ್ವೀರ್ ಗುಂಪಿನಲ್ಲಿ ಪ್ರಮುಖವಾಗಿ ಗುರುತಿಸಿಕೊಂಡಿದ್ದ ಅಲಿ. ನಂತರ ತಾನೇ ರೌಡಿಸಂಗೆ ಇಳಿದಿದ್ದ. ಸುಮಾರು 7 ಪ್ರಕರಣಗಳಲ್ಲಿ ಖುಲಾಸೆಗೊಂಡಿದ್ದ. ಬಳಿಕ ಪೆರೋಲ್ ಮೂಲಕ ಹೊರಬಂದ ಅಲಿ ಬಿಬಿಎಂಪಿ ಚುನಾವಣೆಗೆ ಸ್ಪರ್ಧಿಸಲು ಕಾಂಗ್ರೆಸ್ ಕದ ತಟ್ಟಿದ್ದ. ಆದರೆ ಕಾಂಗ್ರೆಸ್ ಟಿಕೆಟ್ ನಿರಾಕರಿಸಿದ್ದರಿಂದ ಅಲಿ ಜೆಡಿಎಸ್‌ನಿಂದ ಸ್ಪರ್ಧಿಸಿ ಗೆಲುವು ಸಾಧಿಸಿದ್ದ.
ಶೂಟೌಟ್ ಹುನ್ನಾರ-ಕುಮಾರಸ್ವಾಮಿ ಕಾರ್ಪೋರೇಟರ್ ದಿವಾನ್ ಅಲಿಯ ಹತ್ಯೆಗೆ ಪೊಲೀಸ್ ಇಲಾಖೆಯೇ ಸಂಚು ರೂಪಿಸಿತ್ತು ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಪ್ರತಿಕ್ರಿಯೆ ನೀಡಿದ್ದಾರೆ.
ದಿವಾನ್ ಅಲಿಯ ಶೂಟೌಟ್ ಬಗ್ಗೆ ಈ ಹಿಂದೆಯೇ ಶಂಕೆ ಮೂಡಿತ್ತು. ಇದು ಪೊಲೀಸ್ ಇಲಾಖೆಯ ಸಂಚಿನಿಂದಲೇ ನಡೆದ ಶೌಟೌಟ್ ಎಂದು ಅವರು ಗಂಭೀರವಾಗಿ ಆರೋಪಿಸಿದ್ದಾರೆ. ಇಷ್ಟು ದಿನ ಅಲಿ ಮೇಲೆ ನಡೆಯದ ದಾಳಿ, ಇದೀಗ ದಿಢೀರನೆ ಹತ್ಯೆ ಮಾಡಲು ಕಾರಣ ಏನು ಎಂಬ ಬಗ್ಗೆ ತನಿಖೆ ನಡೆಯಬೇಕಾಗಿದೆ ಎಂದು ಕುಮಾರಸ್ವಾಮಿ ತಿಳಿಸಿದ್ದಾರೆ.