ಜೆಡಿಎಸ್‌ನ ಪುಟ್ಟಣ್ಣ ಅವರ ಪದಚ್ಯುತಿಯಿಂದ ತೆರವಾದ ವಿಧಾನ ಪರಿಷತ್ತಿನ ಉಪಸಭಾಪತಿ ಸ್ಥಾನದ ಚುನಾವಣೆಗೆ ಅಭ್ಯರ್ಥಿಯಾಗಿ ಬಿಜೆಪಿಯ ಹಿರಿಯ ವಿಧಾನಪರಿಷತ್ ಸದಸ್ಯೆ ವಿಮಲಾಗೌಡ ಒಬ್ಬರೇ ನಾಮಪತ್ರ ಸಲ್ಲಿಸಿರುವುದರಿಂದ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಸೋಮವಾರ ವಿಧಾನಪರಿಷತ್‌ನಲ್ಲಿ ಅಧಿಕೃತ ಘೋಷಣೆ ಮಾತ್ರ ಬಾಕಿ ಉಳಿದುಕೊಂಡಿದೆ. ಈ ಮಧ್ಯೆ ನಾಮಪತ್ರ ಸಲ್ಲಿಕೆ ನಂತರ ಸುದ್ದಿಗಾರರ ಜತೆ ಮಾತನಾಡಿದ ವಿಮಲಾ ಗೌಡ, ಪಕ್ಷಾತೀತವಾಗಿ ಕೆಲಸ ಮಾಡುವುದಾಗಿ ತಿಳಿಸಿದರು.
ಪಕ್ಷಕ್ಕೆ ಸಲ್ಲಿಸಿದ ಸೇವೆಯನ್ನು ಪಕ್ಷದ ವರಿಷ್ಠರು ಮತ್ತು ಮುಖ್ಯಮಂತ್ರಿ ಯಡಿಯೂರಪ್ಪ ಗಮನಿಸಿ ಈ ಜವಾಬ್ದಾರಿ ನೀಡಿರುವುದು ತನಗೆ ಸಂತೋಷ ತಂದಿದೆ ಎಂದು ಪ್ರತಿಕ್ರಿಯಿಸಿದರು.
ಪುಟ್ಟಣ್ಣ ಅವರನ್ನು ಉಪಸಭಾಪತಿ ಸ್ಥಾನದಿಂದ ಕೆಳಗಿಳಿಸಿ ಹೊಸ ಸಂಪ್ರದಾಯಕ್ಕೆ ನಾಂದಿ ಹಾಡಿದ್ದ ಬಿಜೆಪಿ ನಿಲುವನ್ನು ತೀವ್ರವಾಗಿ ವಿರೋಧಿಸಿರುವ ಕಾಂಗ್ರೆಸ್-ಜೆಡಿಎಸ್ ಸ್ಪರ್ಧೆಯಿಂದ ಹಿಂದೆ ಸರಿದಿದೆ.
ಕಳೆದ ಮೂವತ್ತು ವರ್ಷಗಳಿಂದ ಬಿಜೆಪಿಯ ಸಕ್ರಿಯ ಕಾರ್ಯಕರ್ತೆಯಾಗಿರುವ ವಿಮಲಾಗೌಡ ಅವರು ಸಚಿವ ಸ್ಥಾನಕ್ಕಾಗಿ ನಡೆಸಿದ ಯತ್ನ ಫಲ ನೀಡಿಲ್ಲವಾಗಿತ್ತು. ಬದಲಿಗೆ ಬಿಜೆಪಿ ವರಿಷ್ಠರ ಸಲಹೆ ಮೇರೆಗೆ ವಿಧಾನಪರಿಷತ್ತಿನ ಉಪಸಭಾಪತಿ ಸ್ಥಾನಕ್ಕೆ ಸ್ಪರ್ಧಿಸಿದ್ದಾರೆ. ನಾಳೆ ಮೇಲ್ಮನೆಯಲ್ಲಿ ಚುನಾವಣೆ ನಡೆಯಲಿದ್ದು, ಗೌಡ ಅವರು ಅವಿರೋಧವಾಗಿ ಆಯ್ಕೆಗೊಂಡು ನೂತನ ಉಪಸಭಾಪತಿಯಾಗಲಿದ್ದಾರೆ.
ಬಿ.ಎ. ಪದವೀಧರೆಯಾಗಿರುವ ವಿಮಲಾಗೌಡ 1980ರಲ್ಲಿ ಬಿಜೆಪಿ ಪ್ರವೇಶಿಸಿದ್ದರು. ರಾಜಾಜಿನಗರದ ಕಾರ್ಯಕರ್ತೆಯಾಗಿ ಬೆಂಗಳೂರು ನಗರ ಮಹಿಳಾ ಸಂಚಾಲಕಿಯಾಗಿ, ಆರ್ಎಸ್ಎಸ್ ಕಾರ್ಯಕರ್ತೆಯಾಗಿ, ರಾಜ್ಯ ಬಿಜೆಪಿ ಕಾರ್ಯದರ್ಶಿಯಾಗಿಯೂ ಸೇವೆ ಸಲ್ಲಿಸಿದ್ದರು. 1994ರಲ್ಲಿ ಬಿನ್ನಿ ಪೇಟೆ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸಿದ್ದರು. 2000ದಿಂದ ವಿಧಾನಪರಿಷತ್ ಸದಸ್ಯೆಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಎರಡನೇ ಬಾರಿ ಮೇಲ್ಮನೆ ಸದಸ್ಯೆಯಾಗಿರುವ ಗೌಡ 2001ರಿಂದ 2004ರವರೆಗೆ ರಾಜ್ಯ ಮಹಿಳಾ ಮೋರ್ಚಾ ಅಧ್ಯಕ್ಷೆಯಾಗಿದ್ದರು.