ಆಡಳಿತಾರೂಢ ಬಿಜೆಪಿ ಮತ್ತು ಪ್ರತಿಪಕ್ಷಗಳ ಹಗ್ಗಾಜಗ್ಗಾಟ ಮುಂದುವರಿದಿದ್ದರೆ, ಮತ್ತೊಂದೆಡೆ ರೈತರ ಗೋಳು ಕೇಳುವವರಿಲ್ಲ ಎಂಬುದಾಗಿ ಅಸಮಾಧಾನ ವ್ಯಕ್ತಪಡಿಸಿರುವ ಮಣ್ಣಿನ ಮಕ್ಕಳು ಇದೀಗ ಉಗ್ರ ಹೋರಾಟದ ಹಾದಿ ಹಿಡಿದಿದ್ದಾರೆ.
ಸರಕಾರ ಪೂರೈಸಿರುವ ತೊಗರಿ ಬೀಜ ಕಳಪೆಯಾಗಿದ್ದು, ಮತ್ತೊಂದೆಡೆ ತೊಗಲಿ ಫಸಲು ಚೆನ್ನಾಗಿ ಬಂದರೂ ಮಾರುಕಟ್ಟೆಯಲ್ಲಿ ಬೆಲೆ ಇಲ್ಲದೆ ರೈತರು ಆತಂಕ ಪಡುವಂತಾಗಿದೆ. ಸಂಕಷ್ಟದಲ್ಲಿ ಸಿಲುಕಿರುವ ಗುಲ್ಬರ್ಗದ ರೈತರು ಸಿಎಂ ಮತ್ತು ಬಿಜೆಪಿ ವರಿಷ್ಠರಿಗೆ ರಕ್ತ ಪತ್ರ ಕಳುಹಿಸಲು ನಿರ್ಧರಿಸಿದ್ದಾರೆ. ಆಗಲೂ ಸಮಸ್ಯೆ ಪರಿಹಾರವಾಗದಿದ್ದರೆ ಆತ್ಮಾಹುತಿ ಮಾಡಿಕೊಳ್ಳಲು ಸಿದ್ದ ಎಂದು ರೈತರು ಎಚ್ಚರಿಕೆಯನ್ನು ನೀಡಿದ್ದಾರೆ.
ಜನವರಿ 13ರಿಂದ ಜೇವರ್ಗಿ ತಹಸೀಲ್ದಾರ್ ಕಚೇರಿ ಮುಂದೆ ಧರಣಿ ಕುಳಿತಿರುವ ರೈತರು 4 ದಿನಗಳಾದರೂ ಸರಕಾರ ತಮ್ಮ ಬೇಡಿಕೆಗೆ ಸೂಕ್ತವಾಗಿ ಸ್ಪಂದಿಸುತ್ತಿಲ್ಲ ಎಂದು ಆರೋಪಿಸಿದ್ದಾರೆ. ಈ ಸಂದರ್ಭದಲ್ಲಿ ಕನ್ನಡಪ್ರಭದ ಜತೆ ಮಾತನಾಡಿದ ರೈತ ಮುಖಂಡ ಕೇರಾದಲಿಂಗಯ್ಯ ಹಿರೇಮಠ, ಮಂಗಳವಾರ ಸಾವಿರ ರೈತರು ಹೋರಾಟದ ಸ್ಥಳದಿಂದಲೇ ರಕ್ತದ ಹಸ್ತಾಕ್ಷರ ಮಾಡಿದ ಪತ್ರವನ್ನು ಮುಖ್ಯಮಂತ್ರಿ ಯಡಿಯೂರಪ್ಪ, ಕೃಷಿ ಸಚಿವರು, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ನಿತಿನ್ ಗಡ್ಕರಿ, ಅಡ್ವಾಣಿ, ಸುಷ್ಮಾ ಸ್ವರಾಜ್ ಅವರಿಗೆ ರವಾನಿಸಿ ಸಮಸ್ಯೆಯ ತೀವ್ರತೆಯ ಬಿಸಿ ಮುಟ್ಟಿಸುವುದಾಗಿ ಹೇಳಿದ್ದಾರೆ.
ಈ ರಕ್ತ ಪತ್ರಕ್ಕೂ ಸರಕಾರ ಪ್ರತಿಕ್ರಿಯಿಸದಿದ್ದರೆ ಆತ್ಮಾಹುತಿಗೆ ಮುಂದಾಗಲಿದ್ದೇವೆ ಎಂದು ಎಚ್ಚರಿಸಿದ್ದಾರೆ. ತೊಗರಿ ಬೆಳೆಯಲು ಸಾಲ ಮಾಡಿದ್ದೇವೆ. ಬ್ಯಾಂಕ್‌ನವರು ವಸೂಲಿಗೆ ಮನೆಗೆ ಬಂದು ಹೊಡಿಬಡಿ ಮಾಡತಾರ. ಆ ಅವಮಾನ ಸಹಿಸಿಕೊಂಡು ಇರೋದಕ್ಕಿಂತ ಆತ್ಮಾಹುತಿ ಮಾಡಿಕೊಳ್ಳುವುದೇ ಲೇಸು ಎಂದು ತಮ್ಮ ಅಳಲು ತೋಡಿಕೊಂಡಿದ್ದಾರೆ.