ರಾಜ್ಯದಲ್ಲಿ ಆಡಳಿತಾರೂಢ ಬಿಜೆಪಿ ಸರಕಾರ ನಡೆಸಿರುವ ಭೂ ಹಗರಣದ ಬಗ್ಗೆ ಜನರ ಕಣ್ಣೊರೆಸಲು ತನಿಖೆಯನ್ನು ನ್ಯಾಯಾಂಗ ತನಿಖೆಗೆ ಒಪ್ಪಿಸಿದೆ. ಒಂದು ವೇಳೆ ಭೂ ಹಗರಣದ ಬಗ್ಗೆ ಸಿಬಿಐ ತನಿಖೆ ನಡೆದರೆ ಮುಖ್ಯಮಂತ್ರಿ ಯಡಿಯೂರಪ್ಪ ಜೈಲಿಗೆ ಹೋಗುತ್ತಾರೆ ಎಂದು ಕಾಂಗ್ರೆಸ್ ಮುಖಂಡ ಉಗ್ರಪ್ಪ ತಿಳಿಸಿದ್ದಾರೆ.
ಇಲ್ಲಿನ ಕಾಂಗ್ರೆಸ್ ಕಚೇರಿಯಲ್ಲಿ ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಿಬಿಐ ತನಿಖೆ ನಡೆದರೆ ತಾನು ಜೈಲಿಗೆ ಹೋಗುವುದು ಗ್ಯಾರಂಟಿ ಎಂಬ ಭಯ ಇದ್ದ ಕಾರಣದಿಂದಲೇ ಹಗರಣವನ್ನು ಸಿಎಂ ಸಿಬಿಐಗೆ ಒಪ್ಪಿಸುತ್ತಿಲ್ಲ ಎಂದು ಆರೋಪಿಸಿದರು. ಭೂ ಹಗರಣದ ತನಿಖೆಯನ್ನು ಸರಕಾರ ನ್ಯಾಯಾಂಗ ತನಿಖೆಗೆ ವಹಿಸಿದೆ. ನ್ಯಾಯಾಂಗ ತನಿಖೆಯ ವರದಿ ಸಲ್ಲಿಕೆಯಾದರೂ ಅದನ್ನು ಜಾರಿಗೊಳಿಸುವುದು ಕಷ್ಟ ಎಂದು ಅನುಮಾನ ವ್ಯಕ್ತಪಡಿಸಿದರು.
ಅಧಿಕಾರಕ್ಕೆ ಬಂದ ಎರಡೂವರೆ ವರ್ಷ ಅವಧಿಯಲ್ಲೇ ರಾಜ್ಯ ಸರಕಾರ ಸುಮಾರು ಒಂದು ಲಕ್ಷ ಕೋಟಿ ರೂಪಾಯಿ ಭ್ರಷ್ಟಾಚಾರ ನಡೆಸಿದೆ ಎಂದು ದೂರಿದ ಉಗ್ರಪ್ಪ, ಬಿಜೆಪಿ ವರಿಷ್ಠರೂ ಭ್ರಷ್ಟಾಚಾರದಲ್ಲಿ ಶಾಮೀಲಾಗಿದ್ದಾರೆ ಎಂದರು.
ಅಲ್ಲದೇ ಈ ಸರಕಾರಕ್ಕೆ ಯಾವುದೇ ಬದ್ದತೆ, ಸಿದ್ದಾಂತ ಇಲ್ಲ. ಭ್ರಷ್ಟಾಚಾರ ಎಸಗುವುದು, ಕಳ್ಳರನ್ನು ರಕ್ಷಿಸುವುದೇ ಅದರ ಪ್ರಮುಖ ಅಜೆಂಡಾ. ಆ ನಿಟ್ಟಿನಲ್ಲಿ ಈ ಸರಕಾರ ಹೆಚ್ಚು ದಿನ ಅಧಿಕಾರದಲ್ಲಿರುವ ಸಾಧ್ಯವಿಲ್ಲ ಎಂದು ಭವಿಷ್ಯ ನುಡಿದರು.