ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಜ್ಯ ಸುದ್ದಿ » ದಿವಾನ್ ಅಲಿ ಹತ್ಯೆ;ಯಾರಬ್‌ನಗರದಲ್ಲಿ ಅಘೋಷಿತ ಬಂದ್ (JDS | Divan ali | Kumaraswamy | Yarab nagar, | CCB)
Bookmark and Share Feedback Print
 
ಜೆಡಿಎಸ್‌ನ ಬಿಬಿಎಂಪಿ ಕಾರ್ಪೋರೇಟರ್ ದಿವಾನ್ ಅಲಿ (37) ಹತ್ಯೆಯಿಂದ ಬನಶಂಕರಿಯ ಯಾರಬ್ ನಗರದ ಜನರು ತತ್ತರಿಸಿಹೋಗಿದ್ದು, ಸೋಮವಾರವೂ ಕೂಡ ಅಘೋಷಿತ ಬಂದ್ ವಾತಾವರಣ ಮುಂದುವರಿದಿದೆ. ಸ್ಥಳದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿದೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.

ಭಾನುವಾರ ಮಧ್ಯಾಹ್ನ ರೌಡಿಗಳ ಗುಂಪೊಂದು ದಿವಾನ್ ಅಲಿಯನ್ನು ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಿತ್ತು. ಈ ಸಂದರ್ಭದಲ್ಲಿ ಅಲಿ ರಕ್ಷಣೆಗೆ ಬಂದ ಸೋದರ ಖಲೀಂ(28) ಹಾಗೂ ಸಹಚರ ಉಮರ್ ಅಹ್ಮದ್(28) ಗಂಭೀರವಾಗಿ ಗಾಯಗೊಂಡಿದ್ದು ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಯಾರಬ್ ನಗರದ ಕಚೇರಿಗೆ ಬಂದಿದ್ದ ದಿವಾನ್ ಅಲಿ ಮಧ್ಯಾಹ್ನ ಕಚೇರಿ ಮುಂಭಾಗದ ಕ್ಷೌರಿಕ ಅಂಗಡಿಯಲ್ಲಿ ಹೇರ್ ಕಟ್ ಮಾಡಿಸಿಕೊಂಡು ಹೊರ ಬಂದಿದ್ದ. ಈ ಸಂದರ್ಭದಲ್ಲಿಯೇ ಕಾದು ಕುಳಿತಿದ್ದ ದುಷ್ಕರ್ಮಿಗಳ ತಂಡ ಏಕಾಏಕಿ ಪಿಸ್ತೂಲ್‌ನಿಂದ ಗುಂಡಿನ ದಾಳಿ ನಡೆಸಿತ್ತು. ಆದರೆ ಅಲಿಗೆ ಗುಂಡು ತಾಕಲಿಲ್ಲ. ನಂತರ ಬೆನ್ನಟ್ಟಿದ್ದ ರೌಡಿ ಪಡೆ ಅಲಿಯನ್ನು ಮಚ್ಚು-ಲಾಂಗ್‌ಗಳಿಂದ ಕೊಚ್ಚಿ ಕೊಲೆ ಮಾಡಿತ್ತು.

ಘಟನೆ ನಂತರ ಯಾರಬ್ ನಗರ ಪ್ರದೇಶದಲ್ಲಿ ಉದ್ವಿಗ್ನ ವಾತಾವರಣ ಕಂಡು ಬಂದಿತ್ತು. ಅಂಗಡಿ-ಮುಂಗಟ್ಟುಗಳನ್ನು ಸ್ವಯಂ ಪ್ರೇರಿತವಾಗಿ ಬಂದ್ ಮಾಡಿದ್ದರು. ಇಂದೂ ಕೂಡ ಅಂಗಡಿ-ಮುಂಗಟ್ಟುಗಳು ಬಂದ್ ಆಗಿದೆ. ಯಾರಬ್ ನಗರದಲ್ಲಿ ಯಾವುದೇ ಅಹಿತಕರ ಘಟನೆ ನಡೆಯದಂತೆ ಮುನ್ನೆಚ್ಚರಿಕೆ ಅಂಗವಾಗಿ ಒಂದು ಕೆಎಸ್ಆರ್‌ಪಿ ತುಕಡಿಯನ್ನು ನಿಯೋಜಿಸಲಾಗಿದೆ. ಅಲ್ಲದೇ ಇಬ್ಬರು ಸಿವಿಲ್ ಪೊಲೀಸರನ್ನು ಗಸ್ತು ನಡೆಸುತ್ತಿರುವುದಾಗಿ ಪೊಲೀಸ್ ಮೂಲಗಳು ತಿಳಿಸಿವೆ.

ಆಟೋ ಓಡಿಸಿಕೊಂಡು ಜೀವನ ಸಾಗಿಸುತ್ತಿದ್ದ ದಿವಾನ್ ಅಲಿ, 1994ರಲ್ಲಿ ಭೂಗತ ಲೋಕಕ್ಕೆ ಎಂಟ್ರಿ ಕೊಟ್ಟಿದ್ದ. ಚುಂಚು ಇಸ್ಮಾಯಿಲ್ ಶಿಷ್ಯನಾಗಿದ್ದ ಅಲಿ, ನಂತರ ಗುರುವನ್ನೇ ಕೊಂದು ಜೈಲು ಸೇರಿದ್ದ. ನಂತರ ಮಾಜಿ ರೌಡಿ ತನ್ವೀರ್ ಜತೆ ಗುರುತಿಸಿಕೊಂಡಿದ್ದ. ಹಲವಾರು ಪ್ರಕರಣಗಳಲ್ಲಿ ಭಾಗಿಯಾಗಿದ್ದ ದಿವಾನ್ ಅಲಿ ಗಾಢ್ ಫಾದರ್ ಇಸ್ಮಾಯಿಲ್‌ನನ್ನೇ ಹತ್ಯೆ ಮಾಡಿ ಜೈಲು ಸೇರಿದ್ದ. ಬಳಿಕ ಇಸ್ಮಾಯಿಲ್ ಪುತ್ರ ಆದಿಲ್‌ನನ್ನೂ ಕೊಂದಿದ್ದ. 1996ರಲ್ಲಿ ದಿವಾನ್ ಅಲಿ ವಿರುದ್ಧ ರೌಡಿ ಶೀಟರ್ ತೆರೆಯಲಾಗಿತ್ತು. ಈತನ ಮೇಲೆ ಸುಮಾರು 36 ಪ್ರಕರಣಗಳು ದಾಖಲಾಗಿದ್ದವು.

ಇತ್ತೀಚೆಗೆ ನಡೆದ ಬಿಬಿಎಂಪಿ ಚುನಾವಣೆಯಲ್ಲಿ ಕಾಂಗ್ರೆಸ್ ಟಿಕೆಟ್‌ನಿಂದ ವಂಚಿನಾದ ದಿವಾನ್ ಅಲಿ ಜೆಡಿಎಸ್‌ ಪಕ್ಷದಿಂದ ಟಿಕೆಟ್ ಪಡೆದು ಬನಶಂಕರಿ 180ನೇ ವಾರ್ಡ್‌ನಿಂದ ಸ್ಪರ್ಧಿಸಿ ಗೆಲುವು ಸಾಧಿಸಿದ್ದ. ಮರಳು ಮಾಫಿಯಾದ ವಿಷಯದಲ್ಲಿ ಮಾಜಿ ರೌಡಿ ಮಾಹೀಂ ಜತೆ ದ್ವೇಷ ಕಟ್ಟಿಕೊಂಡಿದ್ದ. ಇದೀಗ ಮಾಹೀಂ ಪಡೆಯೇ ಅಲಿಯನ್ನು ಹತ್ಯೆಗೈದಿದೆ ಎಂಬ ಶಂಕೆ ಪೊಲೀಸ್ ಇಲಾಖೆಯದ್ದು.

ದಿವಾನ್ ಅಲಿ ಹಂತಕರ ಪತ್ತೆಗಾಗಿ ಪೊಲೀಸ್ ಇಲಾಖೆ ವಿಶೇಷ ತಂಡ ರಚಿಸಿದೆ ಎಂದು ಪೊಲೀಸ್ ಆಯುಕ್ತ ಶಂಕರ ಬಿದರಿ ತಿಳಿಸಿದ್ದಾರೆ. ಏತನ್ಮಧ್ಯೆ ಕೆಲವು ಶಂಕಿತರನ್ನು ವಶಕ್ಕೆ ತೆಗೆದುಕೊಂಡು ಇಲಾಖೆ ವಿಚಾರಣೆ ನಡೆಸಿದೆ ಎನ್ನಲಾಗಿದೆ.
ಸಂಬಂಧಿತ ಮಾಹಿತಿ ಹುಡುಕಿ