ಇಡೀ ಜನತಂತ್ರ ವ್ಯವಸ್ಥೆಯೇ ಸಂಪೂರ್ಣ ನಾಶ ಮಾಡುವಂಥ ಕಾರ್ಯವನ್ನು ಬಿಜೆಪಿ ಮಾಡುತ್ತಿದೆ. ಸರಕಾರವನ್ನು ಹೀಗೆಯೇ ಬಿಟ್ಟಲ್ಲಿ ರಾಜ್ಯಕ್ಕೆ ದುರಂತ ಕಾದಿದೆ ಎಂಬುದನ್ನು ಅರಿತು 89 ಭ್ರಷ್ಟಾಚಾರ ಪ್ರಕರಣಗಳನ್ನು ಪಟ್ಟಿ ದೂರು ಸಲ್ಲಿಸಲಾಗಿದೆ ಎಂದು ಜೆಡಿಎಸ್ ವಕ್ತಾರ ವೈಎಸ್‌ವಿ ದತ್ತ ತಿಳಿಸಿದ್ದಾರೆ.
ಸಿದ್ದಾಪುರಕ್ಕೆ ತೆರಳುವ ಮಾರ್ಗ ಮಧ್ಯೆ ಶಿರಸಿಯಲ್ಲಿ ಕಾರ್ಯಕರ್ತರನ್ನು ಭೇಟಿ ಮಾಡಿದ ನಂತರು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯ ಸರಕಾರದ ಈ ಲೂಟಿ ಕೇವಲ ಆಪಾದನೆ ಆಗಿರದೆ ಪ್ರತಿಯೊಂದಕ್ಕೂ ಪುರಾವೆಗಳು ತಮ್ಮ ಬಳಿ ಇವೆ ಎಂದು ಹೇಳಿದರು.
ಭ್ರಷ್ಟಾಚಾರದ ಪ್ರಕರಣಗಳ ಬಗ್ಗೆ ಲೋಕಾಯುಕ್ತಕ್ಕೆ ಅವಕಾಶ ಮಾಡಿ ಕೊಡದೆ ಪದ್ಮರಾಜ್ ಆಯೋಗ ನೇಮಕ ಮಾಡಿ, ಹಗರಣಗಳಿಂದ ತಪ್ಪಿಸಿಕೊಳ್ಳುವ ಪ್ರಯತ್ನ ಮಾಡುತ್ತಿದೆ ಎಂದು ಆರೋಪಿಸಿದರು.
ರಾಜ್ಯದಲ್ಲಿ ಕಳೆದ 35 ವರ್ಷಗಳಲ್ಲಿ ಯಾವುದೇ ಸರಕಾರ ಮಾಡದಷ್ಟು ಭ್ರಷ್ಟಾಚಾರ ಬಿಜೆಪಿ ಸರಕಾರದಿಂದ ಆಗಿದೆ. ಅಧಿಕಾರ ದುರುಪಯೋಗ, ನಿಯಮಗಳ ಉಲ್ಲಂಘನೆ, ರಾಜ್ಯದ ಬೊಕ್ಕಸಕ್ಕೆ ನಷ್ಟ ಇದು ರಾಜ್ಯ ಸರಕಾರದ ಸಾಧನೆ.