'ಸದನದ ಕದನವನ್ನು ವಿಪಕ್ಷಗಳು ಬೀದಿಗೆ ತಂದಿವೆ. ಸದನದಲ್ಲಿರಬೇಕಾದ ಪ್ರತಿಪಕ್ಷದ ಸದಸ್ಯರು ರಾಜಭವನದ ಎದುರು ಪ್ರತಿಭಟನೆ ನಡೆಸುತ್ತಿದ್ದಾರೆ. ರಾಜಕೀಯಕ್ಕೆ ರಾಜಭವನನ್ನು ಎಳೆತಂದಿರುವುದು ನಾಚಿಕೆಗೇಡಿನ ವಿಷಯ' ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ಈ ಬಗ್ಗೆ ಪ್ರತಿಪಕ್ಷಗಳು ಆತ್ಮಾವಲೋಕನ ಮಾಡಿಕೊಳ್ಳಬೇಕು ಎಂದರು.
ಸೋಮವಾರ ಮೇಲ್ಮನೆಯಲ್ಲಿ ಅವಿರೋಧವಾಗಿ ಆಯ್ಕೆಗೊಂಡ ಉಪಸಭಾಪತಿ ವಿಮಲಾಗೌಡ ಅವರನ್ನು ಅಭಿನಂದಿಸಿ ಮಾತನಾಡಿದ ಅವರು, ರಾಜಕೀಯ ಚುನಾವಣಾ ಅಖಾಡದಲ್ಲಿ ಇರಬೇಕು. ಅಭಿವೃದ್ಧಿಯಲ್ಲಿ ಅಲ್ಲ. ಆದರೆ, ಪ್ರತಿಪಕ್ಷಗಳು ಈ ಸದನದಲ್ಲಿ ನಡೆದ ವಿದ್ಯಮಾನಗಳನ್ನು ರಾಜಭವನಕ್ಕೆ ಎಳೆದೊಯ್ದು ರಾಜಕೀಯ ಮಾಡುತ್ತಿವೆ. ಪ್ರತಿಪಕ್ಷಗಳಿಗೆ ಪ್ರಜಾಪ್ರಭುತ್ವದಲ್ಲಿ ವಿಶ್ವಾಸ ಇಲ್ಲ ಎಂದು ವಾಗ್ದಾಳಿ ನಡೆಸಿದರು.
ಉಪಸಭಾಪತಿ ಚುನಾವಣಾ ಸಮಯದಲ್ಲಿ ಸದನದಲ್ಲಿದ್ದು, ಪ್ರತಿಪಕ್ಷಗಳು ಸಹಕಾರ ನೀಡಬೇಕು. ಆದರೆ ಹಠಮಾರಿ ಧೋರಣೆ ಪ್ರದರ್ಶಿಸಿ ಭಂಡತನದ ಪರಮಾಧಿಕಾರದಂತೆ ವರ್ತಿಸುತ್ತಿದ್ದಾರೆ. ಇದನ್ನು ರಾಜ್ಯದ ಜನ ಗಮನಿಸುತ್ತಿದ್ದಾರೆ ಎಂದರು.
ವಿಪಕ್ಷಗಳ ಬಹಿಷ್ಕಾರದ ನಡುವೆ ಗೌಡ ಆಯ್ಕೆ; ಪ್ರತಿಪಕ್ಷಗಳ ಬಹಿಷ್ಕಾರದ ನಡುವೆಯೂ ಸೋಮವಾರ ವಿಧಾನಪರಿಷತ್ ಉಪಸಭಾಪತಿಯಾಗಿ ವಿಮಲಾಗೌಡ ಅವಿರೋಧವಾಗಿ ಆಯ್ಕೆಯಾದರು. ಸಂತಾಪ ಸೂಚಕ ನಿರ್ಣಯದ ನಂತರ ಸಭಾನಾಯಕ ವಿ.ಎಸ್.ಆಚಾರ್ಯ ಅವರು ಸೂಚಿಸಿದ ಪ್ರಸ್ತಾವನೆಯನ್ನು ಎ.ಎಸ್.ಶಿವಯೋಗಿಸ್ವಾಮಿ ಅನುಮೋದಿಸಿದರು. ಬಳಿಕ ಸಭಾಪತಿ ಡಿ.ಎಚ್.ಶಂಕರಮೂರ್ತಿ ಅವರು ವಿಮಲಾಗೌಡ ಅವರ ಆಯ್ಕೆಯನ್ನು ಅಧಿಕೃತವಾಗಿ ಘೋಷಿಸಿದರು.
ಉಪಸಭಾಪತಿಯಾಗಿದ್ದ ಜೆಡಿಎಸ್‌ನ ಪುಟ್ಟಣ್ಣ ಅವರನ್ನು ಅಧಿಕಾರದಿಂದ ಕೆಳಗಿಳಿಸಿದ ಕ್ರಮ ವಿರೋಧಿಸಿ ವಿರೋಧ ಪಕ್ಷಗಳು ಇಂದಿನ ಕಲಾಪವನ್ನು ಬಹಿಷ್ಕರಿಸಿದ್ದವು. ಇಂದು ಕಲಾಪ ಆರಂಭವಾಗುತ್ತಿದ್ದಂತೆಯೇ ವಿರೋಧ ಪಕ್ಷಗಳ ಗೈರು ಹಾಜರಿಯ ನಡುವೆಯೇ ಸಭಾಪತಿ ಶಂಕರಮೂರ್ತಿ ಅವರು ವಿಮಲಾಗೌಡ ಉಪಸಭಾಪತಿಯಾಗಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆಂದು ತಿಳಿಸಿದರು.
ಮೇಲ್ಮನೆ ಕಲಾಪವೂ ಅನಿರ್ದಿಷ್ಟಾವಧಿಗೆ ಮುಂದಕ್ಕೆ ಮೇಲ್ಮನೆಯಲ್ಲಿ ಉಪಸಭಾಪತಿ ವಿಮಲಾಗೌಡ ಅವರ ಆಯ್ಕೆ ಪ್ರಕ್ರಿಯೆ ಪೂರ್ಣಗೊಂಡ ನಂತರ, ವಿಧಾನಪರಿಷತ್ ಕಲಾಪವನ್ನು ಅನಿರ್ದಿಷ್ಟಾವಧಿಗೆ ಮುಂದೂಡಿರುವುದಾಗಿ ಸಭಾಪತಿ ಡಿ.ಎಚ್.ಶಂಕರಮೂರ್ತಿ ಪ್ರಕಟಿಸಿದರು.
ಜನವರಿ 6ರಿಂದ ಆರಂಭಗೊಂಡಿದ್ದ ಮೇಲ್ಮನೆ ಕಲಾಪದಲ್ಲಿಯೂ ಕಾಂಗ್ರೆಸ್ ಮತ್ತು ಜೆಡಿಎಸ್ ಸದಸ್ಯರು, ಆಡಳಿತಾರೂಢ ಬಿಜೆಪಿ ಸರಕಾರದ ಭ್ರಷ್ಟಾಚಾರ ಮತ್ತು ಬಿ.ಎಸ್.ಯಡಿಯೂರಪ್ಪ ಅವರ ರಾಜೀನಾಮೆಗೆ ಆಗ್ರಹಿಸಿ ಪ್ರತಿಭಟನೆ, ಕಲಾಪ ಬಹಿಷ್ಕಾರದಲ್ಲಿಯೇ ಕಾಲಕಳೆದಿದ್ದವು. ಹಾಗಾಗಿ ಇಂದೂ ಕೂಡ ಪ್ರತಿಪಕ್ಷಗಳು ಕಲಾಪವನ್ನು ಬಹಿಷ್ಕರಿಸಿದ್ದವು.
ಆಡಳಿತಾರೂಢ ಮತ್ತು ಪ್ರತಿಪಕ್ಷಗಳ ಮುಖಂಡರ ಹಗ್ಗಜಗ್ಗಾಟದಲ್ಲಿಯೇ ವಿಧಾನಪರಿಷತ್ ಕಲಾಪವೂ ಯಾವುದೇ ಮಹತ್ವದ ಚರ್ಚೆ, ನಿರ್ಣಯ ಅಂಗೀಕಾರವಿಲ್ಲದೆ ಬಲಿಯಾಯಿತು. ಜನವರಿ 21ರವರೆಗೆ ನಡೆಯಬೇಕಾಗಿದ್ದ ಕಲಾಪವನ್ನು, ಸಭಾಪತಿ ಅವರು ಅನಿರ್ದಿಷ್ಟಾವಧಿವರೆಗೆ ಮುಂದೂಡಿದರು.