ಭೂಹಗರಣ, ಸ್ವಜನ ಪಕ್ಷಪಾತ, ಭ್ರಷ್ಟಾಚಾರದ ಆರೋಪ ಹೊತ್ತಿರುವ ಬಿಜೆಪಿ ಸರ್ಕಾರವನ್ನು ವಜಾ ಮಾಡಬೇಕು. ಕೂಡಲೇ ರಾಷ್ಟ್ರಪತಿ ಆಡಳಿತ ಜಾರಿ ಮಾಡಬೇಕು ಎಂದು ಜೆಡಿಎಸ್ ನಾಯಕರು ರಾಜ್ಯಪಾಲ ಎಚ್.ಆರ್.ಭಾರದ್ವಾಜ್ ಅವರಿಗೆ ಮನವಿ ಮಾಡಿ ಒತ್ತಾಯಿಸಿದ್ದಾರೆ.
ನಂತರ ಸುದ್ದಿಗಾರರ ಜತೆ ಮಾತನಾಡಿದ ಶಾಸಕಾಂಗ ಪಕ್ಷದ ನಾಯಕ ಎಚ್.ಡಿ.ರೇವಣ್ಣ ಭೂಹಗರಣದ ಬಗ್ಗೆ ಚರ್ಚೆ ಮಾಡದೆ ಮುಖ್ಯಮಂತ್ರಿ ರಣಹೇಡಿಯಂತೆ ಪಲಾಯನ ಮಾಡಿದ್ದಾರೆ ಎಂದು ಕಿಡಿಕಾರಿದರು.
ಅಧಿವೇಶನಕ್ಕೆ ಮುನ್ನ ದಾಖಲೆ ಸಮೇತ ಬನ್ನಿ ಎಂದು ಕರೆಕೊಟ್ಟಿದ್ದ ಮುಖ್ಯಮಂತ್ರಿಯವರು ಆನಂತರ ಸದನದಲ್ಲಿ ಯಾವುದೇ ಗಂಭೀರ ವಿಷಯಗಳನ್ನು ಪ್ರಸ್ತಾಪ ಮಾಡಲು ಅವಕಾಶ ಮಾಡಿಕೊಡಲಿಲ್ಲ. ಬದಲಾಗಿ ವಿರೋಧ ಪಕ್ಷದ ಸದಸ್ಯರ ಮೇಲೆ ದೌರ್ಜನ್ಯ, ದಬ್ಬಾಳಿಕೆ, ದರ್ಪ ನಡೆಸಿದ್ದಾರೆ. ಈಗ ವಿರೋಧ ಪಕ್ಷಗಳನ್ನು ಮಟ್ಟ ಹಾಕಲು ಶಾಸಕರನ್ನು ಅಮಾನತು ಮಾಡುವ ಬೆದರಿಕೆ ಹಾಕುತ್ತಿದ್ದಾರೆ. ಇವರ ಗೊಡ್ಡು ಬೆದರಿಕೆಗೆ ನಾವು ಜಗ್ಗುವುದಿಲ್ಲ. ನಮ್ಮ ಹೋರಾಟ ನಿಲ್ಲಿಸುವುದಿಲ್ಲ ಎಂದು ಹೇಳಿದರು.
ವಿಧಾನಸೌಧದಲ್ಲಿ ಶಾಸಕಾಂಗ ಪಕ್ಷದ ಸಭೆ ನಡೆಸಿದ ರೇವಣ್ಣ ನಂತರ ಶಾಸಕರಾದ ನಾಣಯ್ಯ, ಬಾಲಕೃಷ್ಣ, ದತ್ತ, ನಾಡಗೌಡ ಸೇರಿದಂತೆ ಶಾಸಕರ ಜತೆಗೂಡಿ ರಾಜಭವನ ಮುಂಭಾಗ ಪ್ರತಿಭಟನೆ ನಡೆಸದೆ ರಾಜ್ಯಪಾಲರಿಗೆ ದೂರು ನೀಡಿದರು.
ರಾಜ್ಯಪಾಲರಿಗೆ ದೂರು ನೀಡುವ ಮುನ್ನ ಬಿಜೆಪಿ ಸರಕಾರದ ವಿರುದ್ದ ಜೆಡಿಎಸ್‌ನ ಪದ್ಮನಾಭ ರೆಡ್ಡಿ ನೇತೃತ್ವದಲ್ಲಿ ಪ್ರತಿಭಟನೆ ನಡೆಯಿತು. ಸರಕಾರದ ವಿರುದ್ಧ ಘೋಷಣೆ ಕೂಗಿದರು. ಭ್ರಷ್ಟಾ ಸರಕಾರವನ್ನು ವಜಾಗೊಳಿಸಬೇಕು ಒಂದು ಒತ್ತಾಯಿಸಿ ರಾಜಭವನದ ಮುಂದೆ ಪ್ರತಿಭಟನೆ ನಡೆಸುತ್ತಿದ್ದ ನೂರಾರು ಜೆಡಿಎಸ್ ಕಾರ್ಯಕರ್ತರನ್ನು ಪೊಲೀಸರು ಬಂಧಿಸಿ ನಂತರ ಬಿಡುಗಡೆ ಮಾಡಿದರು.