ಅಕ್ಷಯ ಪಾತ್ರೆ ಯೋಜನೆಯ ಹೆಸರಿನಲ್ಲಿ ಲಕ್ಷಾಂತರ ರೂಪಾಯಿ ದೇಣಿಗೆ ಲೂಟಿ ಮಾಡಿರುವ ಇಸ್ಕಾನ್ ಸಂಸ್ಥೆಯ ವಿರುದ್ಧ ನಾನು ಮಾಡಿರುವ ದಾಖಲೆ, ಸಿಡಿ ಸುಳ್ಳು ಎಂದು ಸಾಬೀತು ಮಾಡಿದರೆ ನೇಣಿಗೆ ಕೊರಳೊಡ್ಡಲು ಸಿದ್ದ ಎಂದು ಕಾಂಗ್ರೆಸ್ ಮುಖಂಡ ಡಿ.ಕೆ.ಶಿವಕುಮಾರ್ ಸವಾಲು ಹಾಕಿದ್ದಾರೆ.
ಇಸ್ಕಾನ್ ಬಿಸಿಯೂಟದ ಯೋಜನೆ ಅವ್ಯವಹಾರದ ಕುರಿತು ವಿಧಾನಮಂಡಲ ಸದನ ಸಮಿತಿಯು ನೆರವು ನೀಡುವ ಉದ್ದೇಶದಿಂದಲೇ ನನ್ನ ಆರೋಪಗಳನ್ನು ಒಪ್ಪಿಯೂ ಯಾವುದೇ ಕ್ರಮ ಕೈಗೊಳ್ಳದಂತಹ ವರದಿ ನೀಡಿದೆ. ಇದನ್ನು ತಿರಸ್ಕರಿಸಬೇಕು. ಕೇಂದ್ರ ಮತ್ತು ರಾಜ್ಯ ಸರಕಾರದ ಅಧಿಕೃತ ಮಾಹಿತಿ ಆಧಾರದ ಮೇಲೆ ನಾನು ಇಸ್ಕಾನ್ ಅವ್ಯವಹಾರದ ವಿರುದ್ಧ ಧ್ವನಿ ಎತ್ತಿದ್ದೇನೆ. ಹಾಗಾಗಿ ಇಸ್ಕಾನ್ ಆಡಳಿತ ಮಂಡಳಿಯಲ್ಲಿರುವ ಪ್ರತಿಯೊಬ್ಬರ ಮೇಲೂ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.
ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಇಸ್ಕಾನ್ ಅವ್ಯವಹಾರದ ಕುರಿತು ಕೇಂದ್ರ ಮತ್ತು ರಾಜ್ಯ ಸರಕಾರದ ಅಧಿಕಾರಿಗಳು ಮಾಹಿತಿ ಹಕ್ಕು ಕಾಯ್ದೆಯಡಿ ಒದಗಿಸಿರುವ ಪುಟಗಟ್ಟಲೇ ದಾಖಲೆಗಳನ್ನು ಬಿಡುಗಡೆ ಮಾಡಿದರು.
ಇಸ್ಕಾನ್ ಅಂಗಸಂಸ್ಥೆಯೊಂದು 5 ಲಕ್ಷ ಮಕ್ಕಳಿಗೆ ಬಿಸಿಯೂಟ ನೀಡುತ್ತಿರುವುದಾಗಿ ಹೇಳಿ ಆದಾಯ ತೆರಿಗೆಯಿಂದ ವಿನಾಯ್ತಿ ಪಡೆದಿದೆ. ವಾಸ್ತವವಾಗಿ ಈ ಯೋಜನೆಯನ್ನು ಜಾರಿಗೊಳಿಸುತ್ತಿರುವ ಅಕ್ಷಯ ಪಾತ್ರೆ ಫೌಂಡೇಷನ್. ಆದರೆ, ಆದಾಯ ತೆರಿಗೆ ವಿನಾಯ್ತಿ ಪಡೆದಿರುವುದು ಬೇರೊಂದು ಫೌಂಡೇಶನ್. ಈ ರೀತಿ ದೇಶಕ್ಕೆ ತೆರಿಗೆ ವಂಚಿಸುತ್ತಿರುವ ಈ ಸಂಸ್ಥೆಯ ಮುಖ್ಯಸ್ಥರ ಮೇಲೆ ಕ್ರಮ ತೆಗೆದುಕೊಳ್ಳಬೇಕು ಎಂದರು.