ಮಠಗಳು ಕಪ್ಪು ಹಣ ಇಡುವ ಕೇಂದ್ರ ಸ್ಥಾನಗಳಾಗುತ್ತಿದ್ದು, ಅಕ್ರಮವಾಗಿ ಜಮೀನು ಒತ್ತುವರಿ ಕೂಡ ಮಾಡುತ್ತಿವೆ. ಹೀಗಾದರೆ ನ್ಯಾಯ-ಧರ್ಮ ಉಳಿಯುತ್ತದೆಯೇ ಎಂದು ಸಾಹಿತಿ ದೇವನೂರು ಮಹದೇವ ಮತ್ತೆ ಮಠ-ಮಾನ್ಯಗಳ ವಿರುದ್ಧ ತಮ್ಮ ವಾಗ್ದಾಳಿಯನ್ನು ಮುಂದುವರಿಸಿದ್ದಾರೆ.
ಸೋಮವಾರ ಆರಂಭವಾದ 2ನೇ ದಲಿತ ಸಾಹಿತ್ಯ ಸಾಂಸ್ಕೃತಿಕ ಕಲಾ ಸಪ್ತಾಹದಲ್ಲಿ ಅವರು ಮಾತನಾಡಿದರು. ಅನ್ಯಾಯ, ದರೋಡೆ ತಾಂಡವವಾಡುತ್ತಿದೆ. ಇದನ್ನು ಪ್ರಶ್ನಿಸಬೇಕಾದ ಸಾಮಾಜಿಕ ಪ್ರಜ್ಞೆಗೆ ಕುಷ್ಠರೋಗ ಬಂದಿದೆ. ಚುನಾವಣೆಯಲ್ಲಿ ಹಣದ ಥೈಲಿ ಹೆಚ್ಚಿದೆ. ಜನಪ್ರತಿನಿಧಿ ಈಗ ಮನುಷ್ಯನಾಗಿ ಉಳಿದಿಲ್ಲ ಎಂದರು. ಪ್ರತಿಯೊಬ್ಬರ ಮೇಲೂ ಸಾಲದ ಹೊರೆ ಏರುತ್ತಿದೆ. ಯಾರೊಬ್ಬರಿಗೂ ಮಾತನಾಡಲು ಅವಕಾಶವಿಲ್ಲದಂತಾಗಿದೆ ಎಂದು ವಿಷಾದಿಸಿದರು.
ಗಣಿ ಧಣಿಗಳು ರಾಜ್ಯದ ಗಡಿಕಲ್ಲು ಕಿತ್ತು ಹಾಕಿದ್ದಾರೆ. ಅಧಿಕಾರಿಗಳೇ ಜಪ್ತಿ ಮಾಡಿದ್ದ ಅಕ್ರಮ ಅದಿರು ದಾಸ್ತಾನು ಮಂಗಮಾಯವಾಗಿದೆ. ರಾಜ್ಯ ಸರಕಾರ ಜೀವಂತವಾಗಿದೆಯೇ ಎಂದು ವ್ಯಂಗ್ಯವಾಡಿದರು.