ಆಡಳಿತಾರೂಢ ಬಿಜೆಪಿ ಸರಕಾರದ ವಿರುದ್ಧ ವಾಗ್ದಾಳಿ ನಡೆಸುತ್ತಿರುವ ಅನರ್ಹ ಶಾಸಕ ಬೇಳೂರು ಗೋಪಾಲಕೃಷ್ಣ ಅವರಿಗೆ ಚುನಾವಣಾ ನೀತಿ ಸಂಹಿತೆ ಉಲ್ಲಂಘನೆ ಪ್ರಕರಣದಲ್ಲಿ ನ್ಯಾಯಾಲಯಕ್ಕೆ ಸರಿಯಾಗಿ ಹಾಜರಾಗದ ಕಾರಣ ಜೆಎಂಎಫ್ ನ್ಯಾಯಾಲಯ 100 ರೂಪಾಯಿ ದಂಡ ವಿಧಿಸಿದೆ.
2008ರ ವಿಧಾನಸಭೆ ಚುನಾವಣಾ ಸಂದರ್ಭದಲ್ಲಿ ಅನುಮತಿ ಇಲ್ಲದೆ ಸಮಾರಂಭ ನಡೆಸಿದರು ಎನ್ನುವ ಕಾರಣಕ್ಕೆ ಬೇಳೂರು ವಿರುದ್ಧ ನೀತಿ ಸಂಹಿತೆ ಉಲ್ಲಂಘನೆ ಪ್ರಕರಣ ದಾಖಲಾಗಿತ್ತು. ಈ ಹಿಂದೆಯೇ ಅವರು ಈ ಪ್ರಕರಣದಲ್ಲಿ ನ್ಯಾಯಾಲಯಕ್ಕೆ ಹಾಜರಾಗಿ ಜಾಮೀನು ಪಡೆದಿದ್ದರು.
ಪ್ರಕರಣದ ಹಿಂದಿನ ವಿಚಾರಣೆ ದಿನಾಂಕದಂದು ಬೇಳೂರು ನ್ಯಾಯಾಲಯಕ್ಕೆ ಗೈರು ಹಾಜರಾಗಿದ್ದರಿಂದ ನ್ಯಾಯಾಧೀಶರು ಅವರ ವಿರುದ್ಧ ಜಾಮೀನು ರಹಿತ ವಾರಂಟ್ ಆದೇಶ ಹೊರಡಿಸಿದ್ದರು. ಸೋಮವಾರ ಖುದ್ದಾಗಿ ನ್ಯಾಯಾಲಯಕ್ಕೆ ಹಾಜರಾದ ಬೇಳೂರು ತಮ್ಮ ವಕೀಲರ ಮೂಲಕ ವಾರಂಟ್ ಆದೇಶ ರದ್ದುಗೊಳಿಸಲು ಅರ್ಜಿ ಸಲ್ಲಿಸಿದರು.
ನ್ಯಾಯಾಲಯಕ್ಕೆ ಸರಿಯಾಗಿ ಹಾಜರಾಗುವಂತೆ ಸೂಚಿಸಿದ ನ್ಯಾಯಾಧೀಶರು 100 ರೂಪಾಯಿ ದಂಡ ವಿಧಿಸಿ ಬೇಳೂರು ವಿರುದ್ಧದ ವಾರಂಟ್ ಆದೇಶ ರದ್ದುಗೊಳಿಸಿದರು.