'ಅಪ್ಪ-ಮಕ್ಕಳು ಯಾರನ್ನೂ ನೆಮ್ಮದಿಯಿಂದ ಬದುಕಲು ಬಿಟ್ಟಿಲ್ಲ. ಅದಕ್ಕೆ ಈ ವಿಧಾನಸೌಧವೇ ಸಾಕ್ಷಿ. ಎರಡು ದಿನಕ್ಕೊಮ್ಮೆ ರಾಜಭವನಕ್ಕೆ ಭೇಟಿ ನೀಡುವ ಮೂಲಕ ರಾಜ್ಯದಲ್ಲಿ ರಾಷ್ಟ್ರಪತಿ ಆಳ್ವಿಕೆ ಹೇರುವ ಹುನ್ನಾರ ನಡೆಸುತ್ತಿದ್ದಾರೆ' ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಮತ್ತು ಕುಮಾರಸ್ವಾಮಿ ವಿರುದ್ಧ ವಾಗ್ದಾಳಿ ನಡೆಸಿದರು.
ಮಂಗಳವಾರ ನಗರದಲ್ಲಿ ಸುದ್ದಿಗಾರರ ಜತೆ ಮಾತನಾಡಿದ ಅವರು, ಈ ಹಿಂದಿನ ಮುಖ್ಯಮಂತ್ರಿಗಳಾಗಿದ್ದ ಜೆ.ಎಚ್.ಪಟೇಲ್, ರಾಮಕೃಷ್ಣ ಹೆಗಡೆ, ಬೊಮ್ಮಾಯಿ ಸೇರಿದಂತೆ ಹಲವು ಮುಖಂಡರಿಗೆ ದೇವೇಗೌಡರು ಏನೆಲ್ಲಾ ಕಾಟ ಕೊಟ್ಟಿದ್ದಾರೆ ಎಂಬುದು ರಾಜ್ಯದ ಜನತೆಗೆ ಗೊತ್ತಿದೆ. ಅವೆಲ್ಲವನ್ನೂ ಕೇವಲ ಅಧಿಕಾರ ದಾಹಕ್ಕಾಗಿ ಮಾಡಿದ್ದಾರೆ. ಈಗಲೂ ಕೂಡ ಅದೇ ಚಾಳಿಯನ್ನು ಮುಂದುವರಿಸಿದ್ದಾರೆ ಎಂದು ಕಿಡಿಕಾರಿದರು.
ಅನಾವಶ್ಯಕವಾಗಿ ಆರೋಪ ಮಾಡುವುದನ್ನು ಬಿಟ್ಟು ಅಪ್ಪ-ಮಕ್ಕಳು ಬಹಿರಂಗ ಚರ್ಚೆಗೆ ಬರಲಿ, ಬುದ್ಧಿಜೀವಿಗಳು, ಮೇಧಾವಿಗಲು ಹಾಗೂ ಮಾಧ್ಯಮದವರ ಸಮ್ಮುಖದಲ್ಲೇ ಚರ್ಚೆಯಾಗಲಿ. ಅದರ ನೇರ ಪ್ರಸಾರವಾಗಲಿ. ವಿಧಾನಸೌಧದಲ್ಲಿಯೂ ಚರ್ಚೆ ನಡೆಸಲು ನಾನು ಸಿದ್ದ ಎಂದು ಯಡಿಯೂರಪ್ಪ ಸವಾಲು ಹಾಕಿದರು.
ಕೇವಲ ಅಧಿಕಾರದ ಆಸೆಗಾಗಿ ರಾಜ್ಯ ಸರಕಾರದ ಮೇಲೆ ಆರೋಪ ಹೊರಿಸಿ ಪ್ರತಿಭಟನೆ ನಡೆಸುತ್ತಿದ್ದಾರೆ. ಅಲ್ಲದೇ ಕೇಂದ್ರ ಮತ್ತು ರಾಜ್ಯಪಾಲರ ಮೇಲೆ ಒತ್ತಡ ಹೇರಿ ರಾಜ್ಯದಲ್ಲಿ ರಾಷ್ಟ್ರಪತಿ ಆಡಳಿತ ಹೇರುವ ಸಂಚು ರೂಪಿಸುತ್ತಿದ್ದಾರೆ ಎಂದು ದೂರಿದರು. ಅಭಿವೃದ್ಧಿಯನ್ನು ಸಹಿಸದೆ ಇಂತಹ ಕೀಳುಮಟ್ಟದ ರಾಜಕೀಯ ಮಾಡುತ್ತಿದ್ದಾರೆ. ಇದನ್ನು ರಾಜ್ಯದ ಜನತೆ ಅರ್ಥ ಮಾಡಿಕೊಳ್ಳಬೇಕು ಎಂದು ಈ ಸಂದರ್ಭದಲ್ಲಿ ಮನವಿ ಮಾಡಿಕೊಂಡರು.
ಕೈಲಾಗದವನು ಮೈಯೆಲ್ಲ ಪರಚಿಕೊಂಡ ಎಂಬ ಗಾದೆ ಮಾತಿನಂತೆ ಅಪ್ಪ-ಮಕ್ಕಳು ಒಂದಲ್ಲ ಒಂದು ರೀತಿಯಲ್ಲಿ ಆರೋಪ ಹೊರಿಸುತ್ತ ರಾಜಭವನದ ಮೆಟ್ಟಿಲು ಹತ್ತುತ್ತಿದ್ದಾರೆ ಎಂದು ಆರೋಪಿಸಿದರು.
ಇಂದು ಮತ್ತೆ ದೆಹಲಿಗೆ ತೆರಳಿ ಪಕ್ಷದ ರಾಷ್ಟ್ರಾಧ್ಯಕ್ಷ ನಿತಿನ್ ಗಡ್ಕರಿ ಅವರನ್ನು ಭೇಟಿಯಾಗಿ ಪ್ರಸಕ್ತ ರಾಜಕೀಯ ವಿದ್ಯಮಾನಗಳ ಬಗ್ಗೆ ಚರ್ಚಿಸುವುದಾಗಿ ಹೇಳಿದರು. ಅಲ್ಲದೇ ಸಂಪುಟ ಪುನಾರಚನೆ ಕುರಿತು ಮಾತುಕತೆ ನಡೆಸುವುದಾಗಿ ಈ ಸಂದರ್ಭದಲ್ಲಿ ತಿಳಿಸಿದರು.