ಉದ್ಯಾನ ನಗರಿಯರ ಬಹುನಿರೀಕ್ಷಿತ ಮೆಟ್ರೊ ರೈಲು ಸಂಚಾರ ಬೈಯಪ್ಪನಹಳ್ಳಿಯಿಂದ-ಎಂ.ಜಿ.ರಸ್ತೆಯವರಿಗೆ ಜನವರಿ 24ರಿಂದ ಪ್ರಾಯೋಗಿಕ ಸಂಚಾರ ಆರಂಭಗೊಳ್ಳಲಿದೆ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ತಿಳಿಸಿದರು.
ಜೆ.ಪಿ.ನಗರದ 24ನೇ ಮುಖ್ಯರಸ್ತೆಯ ಜಂಕ್ಷನ್‌ನಲ್ಲಿ ಮಾಜಿ ಕ್ರಿಕೆಟಿಗ ಜಿ.ಆರ್.ವಿಶ್ವನಾಥ್ ಹೆಸರಿನ ಅಂಡರ್‌ಪಾಸ್ ಉದ್ಘಾಟಿಸಿ ಮಾತನಾಡಿದ ಅವರು, ಜನವರಿ 24ರಂದು ಮೆಟ್ರೊ ರೈಲು ಸಂಚಾರ ಆರಂಭಿಸಲು ಎಲ್ಲಾ ಸಿದ್ದತೆ ಮಾಡಿಕೊಳ್ಳಲಾಗಿದೆ ಎಂದು ಹೇಳಿದರು.
ಬೈಯಪ್ಪನಹಳ್ಳಿ, ಎಂ.ಜಿ.ರಸ್ತೆ ನಡುವಣ ಮೆಟ್ರೊ ರೈಲು ಸಂಚಾರದ ನಂತರ ಉಳಿದ ಮೆಟ್ರೊ ರೈಲು ಸಂಚಾರ ಹಂತ, ಹಂತವಾಗಿ ನಿಗದಿತ ವೇಳೆಗೆ ಆರಂಭಗೊಳ್ಳಲಿದೆ ಎಂದು ವಿವರಿಸಿದರು. ಜ.24ರಂದು ಬೈಯಪ್ಪನಹಳ್ಳಿಯಿಂದ ಎಂ.ಜಿ.ರಸ್ತೆಯವರೆಗೆ ಪ್ರಾಯೋಗಿಕ ಸಂಚಾರದ ಮೂಲಕ ಚಾಲನೆ ನೀಡಲಾಗುವುದು ಎಂದರು.
ನಗರದಲ್ಲಿ ಮೆಟ್ರೊ ರೈಲು ಕಾಮಗಾರಿಗಳು ತ್ವರಿತಗತಿಯಲ್ಲಿ ನಡೆಯುತ್ತಿದ್ದು, ಈಗಾಗಲೇ ರಾಜ್ಯ ಸರಕಾರ ಮೆಟ್ರೊ ರೈಲು ಕಾಮಗಾರಿಗಳಿಗಾಗಿ 2,600 ಕೋಟಿ ರೂಗಳನ್ನು ಬಿಡುಗಡೆ ಮಾಡಿದೆ. ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ಮುಂದುವರಿದ ಯೋಜನಾ ಕಾಮಗಾರಿಗಳು ಡಿಸೆಂಬರ್ ವೇಳೆಗೆ ಪೂರ್ಣಗೊಳಿಸಲು ಕ್ರಮ ಕೈಗೊಳ್ಳಲಾಗುವುದು ಎಂದರು.
ಈಗಾಗಲೇ ಎರಡು ಹವಾನಿಯಂತ್ರಿತ ರೈಲುಗಳನ್ನು ಕೊರಿಯಾದಿಂದ ಆಮದು ಮಾಡಿಕೊಳ್ಳಲಾಗಿದೆ. ಅಲ್ಲದೇ ಮೂರನೇ ರೈಲು ಯಾವ ಸಂದರ್ಭದಲ್ಲಿಯೂ ರಾಜ್ಯಕ್ಕೆ ಆಮದಾಗಲಿದೆ ಎಂದರು.ಅದೇ ರೀತಿ ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಮೆಟ್ರೊ ರೈಲು ಸಂಚಾರ ಮಾರ್ಗದ ಮುಂದುವರಿದ ಭಾಗಕ್ಕೆ ಕೇಂದ್ರ ಸರಕಾರ ಅನುಮತಿ ನೀಡಿದೆ ಎಂದು ಈ ಸಂದರ್ಭದಲ್ಲಿ ಹೇಳಿದರು.