ರಾಜ್ಯ ರಾಜಕಾರಣದಲ್ಲಿ ಆಡಳಿತಾರೂಢ ಮತ್ತು ಪ್ರತಿಪಕ್ಷಗಳ ನಡುವೆ ಆರೋಪ-ಪ್ರತ್ಯಾರೋಪ ನಡೆಯುತ್ತಿದ್ದರೆ, ಮತ್ತೊಂದೆಡೆ ಜಿಲ್ಲಾ ಪಂಚಾಯಿತಿಯ ಅಧಿಕಾರದ ಗದ್ದುಗೆ ಹಿಡಿಯಲು ಪಕ್ಷಗಳು ತೆರೆಮರೆಯಲ್ಲಿ ಕಸರತ್ತು ನಡೆಸುತ್ತಿವೆ. ಆ ನಿಟ್ಟಿನಲ್ಲಿ ಬೆಂಗಳೂರು ನಗರ ಜಿಲ್ಲಾ ಪಂಚಾಯಿತಿಯಲ್ಲಿ ಆಪರೇಶನ್ ಕಮಲದ ಭಯದಿಂದಾಗಿ ಕಾಂಗ್ರೆಸ್, ಜೆಡಿಎಸ್ ಸದಸ್ಯರು ಮುಂಬೈನತ್ತ ಪ್ರಯಾಣ ಬೆಳೆಸಿದ್ದಾರೆ.
34 ಸದಸ್ಯ ಬಲದ ಬೆಂಗಳೂರು ನಗರ ಜಿಲ್ಲಾ ಪಂಚಾಯಿತಿಯಲ್ಲಿ 16 ಬಿಜೆಪಿ, ಕಾಂಗ್ರೆಸ್ 14 ಹಾಗೂ ಜೆಡಿಎಸ್‌ನ 4 ಸದಸ್ಯರು ಗೆಲುವು ಸಾಧಿಸಿದ್ದರು. ಈಗಾಗಲೇ ಬಿಜೆಪಿ ಬಳ್ಳಾರಿಯಲ್ಲಿ ಆಪರೇಶನ್ ಕಮಲ ನಡೆಸಿ ಕಾಂಗ್ರೆಸ್ ಸದಸ್ಯೆಯೊಬ್ಬರನ್ನು ತಮ್ಮ ತೆಕ್ಕೆಗೆ ಹಾಕಿಕೊಂಡಿತ್ತು.
ಇದೀಗ ಬೆಂಗಳೂರು ನಗರ ಜಿಲ್ಲಾ ಪಂಚಾಯಿತಿಯಲ್ಲೂ ಬಿಜೆಪಿ ಆಪರೇಶನ್ ಕಮಲ ನಡೆಸಲು ಮುಂದಾಗಿರುವ ಆತಂಕದ ಬೆನ್ನಲ್ಲೇ ದಯಾನಂದ ರೆಡ್ಡಿ ಮತ್ತು ಇ.ಕೃಷ್ಣಪ್ಪ ನೇತೃತ್ವದಲ್ಲಿ ಕಾಂಗ್ರೆಸ್, ಜೆಡಿಎಸ್ ಸದಸ್ಯರು ಮುಂಬೈಗೆ ತೆರಳಿದ್ದಾರೆ.
ಬಿಜೆಪಿಯ ಶಾಸಕರು, ಸಚಿವರು ಜಿಲ್ಲಾ ಪಂಚಾಯಿತಿ ಸದಸ್ಯರಿಗೆ ಆಮಿಷ ಒಡ್ಡಿ ಅವರನ್ನು ಸೆಳೆಯುವ ತಂತ್ರ ಮಾಡುತ್ತಿತ್ತು. ಆ ನಿಟ್ಟಿನಲ್ಲಿ ಆಪರೇಶನ್ ಕಮಲದ ಭೀತಿಯಿಂದ ತಪ್ಪಿಸಿಕೊಳ್ಳಲು ಕಾಂಗ್ರೆಸ್, ಜೆಡಿಎಸ್ ಸದಸ್ಯರನ್ನು ಮೊದಲು ಧರ್ಮಸ್ಥಳಕ್ಕೆ ಕರೆದುಕೊಂಡು ಹೋಗಿ ಅಲ್ಲಿಂದ ಮುಂಬೈಗೆ ಕರೆದುಕೊಂಡು ಹೋಗುತ್ತಿರುವುದಾಗಿ ಜೆಡಿಎಸ್ ಶಾಸಕ ಇ.ಕೃಷ್ಣಪ್ಪ ಸ್ಪಷ್ಟಪಡಿಸಿದ್ದಾರೆ.