ರಾಜ್ಯ ಅಬಕಾರಿ ಇಲಾಖೆ ಗ್ರಾಹಕರಿಗೆ ತಾಜಾ ಬಿಯರ್ ಅನ್ನು ಒದಗಿಸುವ ನಿಟ್ಟಿನಲ್ಲಿ ಮೈಕ್ರೋ ಬ್ರೀವರಿ ಲೈಸೆನ್ಸ್‌ಗಳನ್ನು ನೀಡಲು ನಿರ್ಧರಿಸಿರುವುದಾಗಿ ಅಬಕಾರಿ ಸಚಿವ ರೇಣುಕಾಚಾರ್ಯ ತಿಳಿಸಿದ್ದಾರೆ.
ಅಮೆರಿಕ ಸೇರಿದಂತೆ ಪಾಶ್ಚಿಮಾತ್ಯ ದೇಶಗಳಲ್ಲಿ ಗ್ರಾಹಕರ ಎದುರಿಗೆ ಬಿಯರ್ ತಯಾರಿಸಿ ಮಾರಾಟ ಮಾಡಲಾಗುತ್ತಿದ್ದು, ರಾಜ್ಯದಲ್ಲೂ ಗ್ರಾಹಕರಿಗೆ ತಾಜಾ ಮೈಕ್ರೋ ಬ್ರೀವರಿ ಲೆಸೆನ್ಸ್‌ಗಳನ್ನು ಹೊಸ ವರ್ಷದ ಕೊಡುಗೆಯಾಗಿ ನೀಡಲಾಗಿದೆ ಎಂದು ಅವರು ಪತ್ರಿಕಾಗೋಷ್ಠಿಯಲ್ಲಿ ಮಾತನಾಡುತ್ತ ವಿವರಿಸಿದರು.
ರಾಜ್ಯದ ಅಬಕಾರಿ ನಿಯಮಗಳಿಗೆ ಸೂಕ್ತ ತಿದ್ದುಪಡಿ ತಂದು ತಾಜಾ ಬಿಯರ್ ತಯಾರಿಸುವ ಮೈಕ್ರೋ ಬ್ರೀವರಿ ಲೈಸೆನ್ಸ್‌ಗಳನ್ನು ಹಾಲಿ ಇರುವ ಬಾರ್, ಕ್ಲಬ್, ಪಂಚತಾರಾ ಹೋಟೆಲ್‌ಗಳಲ್ಲಿ ಆರಂಭಿಸಲು ಅವಕಾಶ ನೀಡಲಾಗಿದೆ ಎಂದರು. ಈ ಬದಲಾದ ನಿಯಮಾವಳಿಗಳಂತೆ ಕನಿಷ್ಠ ಹತ್ತು ಸಾವಿರ ಚದರ ಅಡಿ ಇರುವ ಬಾರ್‌ಗಳು ಮತ್ತು ಕ್ಲಬ್‌ಗಳು ಪಟ್ಟಣ ಪ್ರದೇಶದಲ್ಲಿ ಹತ್ತು ಕೊಠಡಿ ಹೊಂದಿರುವ ಹೋಟೆಲ್ ಮತ್ತು ಸ್ಟಾರ್ ಹೋಟೆಲ್‌ಗಳಲ್ಲಿ ಗ್ರಾಹಕರ ಎದುರಿಗೆ ತಾಜಾ ಬಿಯರ್ ತಯಾರಿಸುವ ಸಣ್ಣ ಪ್ರಮಾಣದ ಬ್ರೀವರಿಗಳನ್ನು ತಯಾರಿಸಲು ಅವಕಾಶ ಕಲ್ಪಿಸಲಾಗಿದೆ ಎಂದು ಹೇಳಿದರು.
ಈ ಲೈಸೆನ್ಸ್‌ಗಳಿಗೆ ಪ್ರತಿವರ್ಷ ಎರಡು ಲಕ್ಷ ರೂಪಾಯಿ ಶುಲ್ಕ ನಿಗದಿ ಮಾಡಲಾಗಿದ್ದು, ಮೈಕ್ರೋ ಬ್ರೀವರಿ ಉತ್ಪಾದನಾ ಸಾಮರ್ಥ್ಯ ಆಧರಿಸಿ ಪ್ರತಿ ಲೀಟರ್ ಉತ್ಪಾದನಾ ಸಾಮರ್ಥ್ಯಕ್ಕೆ 5 ರೂ.ನಂತೆ ಶುಲ್ಕ ಮತ್ತು 12.50 ರೂ.ಹೆಚ್ಚುವರಿ ಅಬಕಾರಿ ಶುಲ್ಕ ಸಹ ವಸೂಲಿ ಮಾಡಲಾಗುವುದು ಎಂದರು.
ಇದೇ ಮೊದಲ ಬಾರಿಗೆ ರಾಜ್ಯದಲ್ಲಿ ಇಂತಹ ಮೈಕ್ರೋ ಬ್ರೀವರಿಗಳನ್ನು ಆರಂಭಿಸಲಾಗುತ್ತಿದ್ದು, ಈ ವರ್ಷ 30ರಿಂದ 50 ಇಂತಹ ಘಟಕಗಳು ಆರಂಭವಾಗುವ ನಿರೀಕ್ಷೆ ಇದ್ದು, ಇದರಿಂದ ಸರಕಾರಕ್ಕೆ 4ರಿಂದ 5 ಕೋಟಿ ರೂ.ಗಳ ಹೆಚ್ಚಿನ ಆದಾಯ ಬರಲಿದೆ ಎಂದು ತಿಳಿಸಿದರು.