ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ದಿಢೀರನೆ ಎರಡು ಬಾರಿ ದೆಹಲಿಗೆ ತೆರಳಿ ವರಿಷ್ಠರನ್ನು ಭೇಟಿ ಮಾಡಿ ಮಾತುಕತೆ ನಡೆಸಿರುವ ಹಿಂದಿನ ರಹಸ್ಯದ ಬಗ್ಗೆಯೇ ರಾಜಕೀಯ ವಲಯದಲ್ಲಿ ಗುಸು,ಗುಸು ಸುದ್ದಿಗೆ ಕಾರಣವಾಗಿದೆ. ಯಡಿಯೂರಪ್ಪನವರ ಮುಖ್ಯಮಂತ್ರಿ ಕುರ್ಚಿ ಅಲುಗಾಡುತ್ತಿದ್ದು ಅದಕ್ಕೆ ದೆಹಲಿ ಯಾತ್ರೆ ಕೈಗೊಂಡಿದ್ದಾರೆ ಎನ್ನಲಾಗುತ್ತಿದೆ.
ಸೋಮವಾರವಷ್ಟೇ ದೆಹಲಿಯಿಂದ ಹಿಂತಿರುಗಿದ್ದ ಯಡಿಯೂರಪ್ಪನವರು ಮಂಗಳವಾರ ಮಧ್ಯಾಹ್ನ ಮತ್ತೆ ದೆಹಲಿ ಯಾತ್ರೆ ಕೈಗೊಂಡಿರುವುದು ಸಹಜವಾಗಿಯೇ ಕುತೂಹಲ ಕೆರಳಿಸಿದೆ. ಮುಖ್ಯಮಂತ್ರಿಗಳು ನಡೆಸಿರುವ ಭ್ರಷ್ಟಾಚಾರದ ಬಗ್ಗೆ ಮೊಕದ್ದಮೆ ಹೂಡಲು ಅನುಮತಿ ನೀಡುವಂತೆ ಲಾಯರ್ಸ್ ಫೋರಂ ಸಲ್ಲಿಸಿರುವ ಅರ್ಜಿ ಬಗ್ಗೆ ರಾಜ್ಯಪಾಲರು ಕೈಗೊಳ್ಳುವ ಕ್ರಮ ಯಡಿಯೂರಪ್ಪನವರ ರಾಜಕೀಯ ಭವಿಷ್ಯವನ್ನು ನಿರ್ಧರಿಸಲಿದೆ.
ಯಾವುದೇ ಕಾರಣಕ್ಕೂ ಮೊಕದ್ದಮೆ ಹೂಡಲು ಲಾಯರ್ಸ್ ಫೋರಂಗೆ ಅನುಮತಿ ನೀಡದಂತೆ ರಾಜ್ಯಪಾಲರ ಮೇಲೆ ಒತ್ತಡ ಹೇರಲು ದೆಹಲಿ ಲಾಬಿ ನಡೆಸಿದ್ದಾರೆ. ಹಾಗೇನಾದರೂ ರಾಜ್ಯಪಾಲರು ಒಪ್ಪಿಗೆ ನೀಡಿದರೆ ಮುಂದೆ ಅನುಸರಿಸಬೇಕಾದ ಕ್ರಮಗಳ ಬಗ್ಗೆ ಬಿಜೆಪಿ ವರಿಷ್ಠರೊಂದಿಗೆ ಯಡಿಯೂರಪ್ಪ ಚರ್ಚೆ ನಡೆಸಲು ದೆಹಲಿಗೆ ನೆಗೆದಿದ್ದಾರೆ ಎಂದು ವಿಶ್ಲೇಷಿಸಲಾಗುತ್ತಿದೆ.
ಪಕ್ಷದ ಹಿರಿಯ ನಾಯಕ ಎಲ್.ಕೆ.ಆಡ್ವಾಣಿ, ಲೋಕಸಭೆಯ ಪ್ರತಿಪಕ್ಷದ ನಾಯಕಿ ಸುಷ್ಮಾ ಸ್ವರಾಜ್, ರಾಜ್ಯಸಭೆ ಪ್ರತಿಪಕ್ಷದ ನಾಯಕ ಅರುಣ್ ಜೇಟ್ಲಿ, ಮಾಜಿ ಅಧ್ಯಕ್ಷ ರಾಜನಾಥ್ ಸಿಂಗ್ ಅವರನ್ನು ಯಡಿಯೂರಪ್ಪ ಭೇಟಿಯಾಗಿ ಚರ್ಚೆ ನಡೆಸಿದ್ದಾರೆ. ಮಂಗಳವಾರ ನಡೆದ ಸಚಿವ ಸಂಪುಟ ಸಭೆಯಲ್ಲೂ ರಾಜಭವನದ ಅಂಗಳದಲ್ಲಿರುವ ಗುಮ್ಮನ ಬಗ್ಗೆ ಚರ್ಚೆ ನಡೆಸಲಾಗಿದೆ. ಹಾಗೇನಾದರೂ ರಾಜ್ಯಪಾಲರು ಮೊಕದ್ದಮೆ ಹೂಡಲು ಅನುಮತಿ ನೀಡಿದರೆ ಮುಜುಗರ ಪರಿಸ್ಥಿತಿ ಎದುರಿಸುವ ಬದಲು ಚುನಾವಣೆಗೆ ಹೋಗುವುದು ಲೇಸು ಎಂಬ ಅಭಿಪ್ರಾಯವನ್ನು ಯಡಿಯೂರಪ್ಪ ವ್ಯಕ್ತಪಡಿಸಿದ್ದಾರೆ.
ಆದರೆ ಇದಕ್ಕೆ ಒಪ್ಪದ ಕೆಲ ಮಂತ್ರಿಗಳು ಯಾವುದೇ ಕಾರಣಕ್ಕೂ ವಿಧಾನಸಭೆ ವಿಸರ್ಜನೆ ಮಾಡುವುದು ಬೇಡ, ಎದುರಾಗುವ ಪರಿಸ್ಥಿತಿಯನ್ನು ನಿಭಾಯಿಸುವ ಎಂದು ಸಲಹೆ ನೀಡಿದ್ದಾರೆ. ಆ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಯಡಿಯೂರಪ್ಪ ದೆಹಲಿ ರಾಜಕಾರಣ ಆರಂಭಿಸಿದ್ದಾರೆ.
ಸಿಎಂ ವಿಚಾರಣೆ-ಮನವಿ ಪರಿಶೀಲಿಸುತ್ತಿದ್ದೇನೆ-ಗವರ್ನರ್; ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ವಿರುದ್ಧದ ಭೂ ಹಗರಣದ ದಾಖಲೆಗಳ ಪರಿಶೀಲನೆ ನಡೆಸುತ್ತಿದ್ದೇನೆ ಎಂದು ರಾಜ್ಯಪಾಲ ಹಂಸರಾಜ್ ಭಾರದ್ವಾಜ್ ತಿಳಿಸಿದ್ದಾರೆ. ಯಡಿಯೂರಪ್ಪ ಅವರ ವಿರುದ್ಧದ ಭೂ ಹಗರಣದ ಅಪಾರ ಪ್ರಮಾಣದ ದಾಖಲೆಗಳು ಬಂದಿದ್ದು ಅವುಗಳ ಪರಿಶೀಲನೆ ನಂತರ ಕಾನೂನು ರೀತಿಯ ಕ್ರಮ ಕೈಗೊಳ್ಳಲಿದ್ದೇನೆ ಎಂದು ಸ್ಪಷ್ಟಪಡಿಸಿದ್ದಾರೆ.
ಜಸ್ಟೀಸ್ ಲಾಯರ್ ಫೋರಂ ಸಲ್ಲಿಸಿರುವ ಮನವಿಯನ್ನು ಪರಿಶೀಲನೆ ನಡೆಸುತ್ತಿದ್ದೇನೆ. ಇದರಲ್ಲಿ ಹಲವಾರು ಆಯಾಮಗಳಿವೆ. ಈ ಕುರಿತಂತೆ ಇನ್ನೂ ಸೂಕ್ತ ನಿರ್ಧಾರ ಕೈಗೊಂಡಿಲ್ಲ ಎಂದರು. ಮೇಲ್ಮನವಿ ಜತೆ ಹಲವಾರು ದಾಖಲೆಗಳಿವೆ. ಅವೆಲ್ಲವನ್ನೂ ಕೂಲಂಕಷವಾಗಿ ಪರಿಶೀಲಿಸಿ ಶೀಘ್ರದಲ್ಲೇ ನಿರ್ಧಾರ ಕೈಗೊಳ್ಳುವುದಾಗಿ ತಿಳಿಸಿದ್ದಾರೆ.
ಜಸ್ಟೀಸ್ ಲಾಯರ್ ಫೋರಂ ಭೂಹಗರಣಗಳ ಆರೋಪ ಹೊತ್ತಿರುವ ಮುಖ್ಯಮಂತ್ರಿ ಯಡಿಯೂರಪ್ಪ, ಗೃಹ ಸಚಿವ ಆರ್.ಅಶೋಕ್ ಅವರನ್ನು ವಿಚಾರಣೆಗೆ ಒಳಪಡಿಸಲು ಅನುಮತಿ ನೀಡುವಂತೆ ರಾಜ್ಯಪಾಲರಿಗೆ ಮನವಿ ಸಲ್ಲಿಸಿದೆ.