ಭೂ ಹಗರಣ ಪ್ರಕರಣಕ್ಕೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹಾಗೂ ಗೃಹಸಚಿವ ಆರ್.ಅಶೋಕ್ ಅವರ ವಿರುದ್ಧ ಮೊಕದ್ದಮೆ ಹೂಡಲು ಅನುಮತಿ ನೀಡಬೇಕೆಂದು ಜಸ್ಟೀಸ್ ಲಾಯರ್ ಫೋರಂ ರಾಜ್ಯಪಾಲರಿಗೆ ಸಲ್ಲಿಸಿರುವ ಅರ್ಜಿಗೆ ಅನುಮತಿ ನೀಡದಂತೆ ಮನವಿ ಕೋರಿ ಬುಧವಾರ ನಡೆದ ಸಂಪುಟ ಸಭೆಯಲ್ಲಿ ರಾಜ್ಯ ಸರಕಾರ ನಿರ್ಣಯ ಕೈಗೊಂಡಿದೆ.
ಮುಖ್ಯಮಂತ್ರಿಗಳ ವಿರುದ್ದದ ಯಾವುದೇ ಆರೋಪ ಸಾಬೀತಾಗಿಲ್ಲ. ಆ ನಿಟ್ಟಿನಲ್ಲಿ ಮುಖ್ಯಮಂತ್ರಿ ಮತ್ತು ಅಶೋಕ್ ವಿರುದ್ಧ ವಿಚಾರಣೆಗೆ ರಾಜ್ಯಪಾಲರು ಅನುಮತಿ ನೀಡದಂತೆ ಸಂಪುಟದಲ್ಲಿ ನಿರ್ಣಯ ಕೈಗೊಳ್ಳಲಾಗಿದೆ ಎಂದು ಸಚಿವ ಸಂಪುಟ ಮುಕ್ತಾಯದ ನಂತರ ಕಾನೂನು ಸಚಿವ ಸುರೇಶ್ ಕುಮಾರ್ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.
ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ನೂರಾರು ಕೋಟಿ ರೂಪಾಯಿ ಅವ್ಯವಹಾರ ನಡೆಸಿದ್ದು, ಅವರ ವಿರುದ್ಧ ಮೊಕದ್ದಮೆ ದಾಖಲಿಸಲು ಅನುಮತಿ ನೀಡುವಂತೆ ಕೋರಿ ನಗರದ ಜಸ್ಟೀಸ್ ಲಾಯರ್ ಫೋರಂ ಇತ್ತೀಚೆಗೆ ರಾಜ್ಯಪಾಲ ಹಂಸರಾಜ್ ಭಾರದ್ವಾಜ್ ಅವರನ್ನು ಭೇಟಿಯಾಗಿ ಮನವಿ ಸಲ್ಲಿಸಿತ್ತು. ಈ ಬಗ್ಗೆ ಪರಿಶೀಲನೆ ನಡೆಸುತ್ತಿದ್ದು, ಸೂಕ್ತ ನಿರ್ಧಾರ ಕೈಗೊಳ್ಳುವುದಾಗಿಯೂ ರಾಜ್ಯಪಾಲರು ಪ್ರತಿಕ್ರಿಯಿಸಿದ್ದರು.
ಏತನ್ಮಧ್ಯೆ ಇಂದು ತುರ್ತು ಸಚಿವ ಸಂಪುಟ ಸಭೆ ಕರೆದ ಮುಖ್ಯಮಂತ್ರಿಗಳು, ಸಿಎಂ ವಿರುದ್ಧದ ಪ್ರಕರಣದ ವಿಚಾರಣೆ ಕುರಿತಂತೆ ಮತ್ತೊಮ್ಮೆ ರಾಜ್ಯಪಾಲರು ಅನುಮತಿ ನೀಡುವುದು ಬೇಡ ಎಂಬ ಮನವಿಯನ್ನು ನಿರ್ಣಯದ ಮೂಲಕ ಕೈಗೊಂಡಿದೆ.
ಭೂ ಹಗರಣಕ್ಕೆ ಸಂಬಂಧಿಸಿದಂತೆ ಈಗಾಗಲೇ ನಿವೃತ್ತ ನ್ಯಾಯಮೂರ್ತಿ ಪದ್ಮರಾಜ್ ನೇತೃತ್ವದ ಆಯೋಗ ತನಿಖೆ ನಡೆಸುತ್ತಿದೆ. ಲೋಕಾಯುಕ್ತರು ಕೂಡ ತನಿಖೆ ನಡೆಸುತ್ತಿದೆ. ಅಲ್ಲದೇ ಉಚ್ಛನ್ಯಾಯಾಲಯದಲ್ಲಿ ಸಲ್ಲಿಸಿರುವ ಅರ್ಜಿಯ ವಿಚಾರಣೆ ಬಾಕಿ ಇದೆ. ಹಾಗಾಗಿ ರಾಜ್ಯಪಾಲರು ಜಸ್ಟೀಸ್ ಲಾಯರ್ ಫೋರಂನ ಮಾಡಿಕೊಂಡ ಮನವಿಗೆ ಅನುಮತಿ ನೀಡುವುದು ಬೇಡ ಎಂದು ಸಂಪುಟ ಸಭೆಯಲ್ಲಿ ನಿರ್ಣಯ ಕೈಗೊಳ್ಳಲಾಗಿದೆ ಎಂದು ಸುರೇಶ್ ಕುಮಾರ್ ವಿವರಿಸಿದರು.
ಭೂ ಹಗರಣಕ್ಕೆ ಸಂಬಂಧಿಸಿದಂತೆ ಹೊಸ ವಿಚಾರಣೆ ಬೇಡ. ಘನತೆವೆತ್ತ ರಾಜ್ಯಪಾಲರು ಲಾಯರ್ ಫೋರಂ ಮನವಿಗೆ ಅನುಮತಿ ನೀಡುವುದಿಲ್ಲ ಎಂಬ ವಿಶ್ವಾಸ ತಮಗಿದೆ ಎಂದು ಅವರು ಈ ಸಂದರ್ಭದಲ್ಲಿ ಹೇಳಿದರು.
ಸಿಎಂ ಪ್ರಾಮಾಣಿಕರಾಗಿದ್ದರೆ ಭಯವೇಕೆ?; ಭೂ ಹಗರಣಕ್ಕೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಯಡಿಯೂರಪ್ಪನವರು ಒತ್ತಡ ತಂತ್ರ ಅನುಸರಿಸುತ್ತಿದ್ದಾರೆ ಎಂದು ವಿಧಾನಸಭೆ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಅಸಮಧಾನ ವ್ಯಕ್ತಪಡಿಸಿದ್ದು, ಸಿಎಂ ಪ್ರಾಮಾಣಿಕರಾಗಿದ್ದರೆ ರಾಜ್ಯಪಾಲರ ಅನುಮತಿ ಬಗ್ಗೆ ಭಯವೇಕೆ ಎಂದು ಪ್ರಶ್ನಿಸಿದ್ದಾರೆ.
ಸಚಿವ ಸಂಪುಟದಲ್ಲಿ ಈ ರೀತಿಯ ನಿರ್ಣಯ ಕೈಗೊಳ್ಳುವುದು ಸರಿಯಲ್ಲ. ರಾಜ್ಯಪಾಲರು ಸಾಕ್ಷ್ಯಾಧಾರ ಪರಿಗಣಿಸಿ ಕ್ರಮ ಕೈಗೊಳ್ಳುತ್ತಾರೆ. ಸಚಿವ ಸಂಪುಟ ಸಭೆಯಲ್ಲಿ ನಿರ್ಣಯ ಕೈಗೊಂಡ ಕೂಡ ರಾಜ್ಯಪಾಲರು ಅದನ್ನು ಒಪ್ಪಿಕೊಳ್ಳಬೇಕು ಎಂಬ ನಿಯಮವಿಲ್ಲ. ಅವರು ಸಂವಿಧಾನಬದ್ಧವಾಗಿ ಕ್ರಮ ಕೈಗೊಳ್ಳುತ್ತಾರೆ ಎಂಬ ವಿಶ್ವಾಸ ಇದೆ ಎಂದರು.