'ಕೈ'-ಜೆಡಿಎಸ್ಗೆ ಮತ್ತೆ ಅಧಿಕಾರ ಸಿಕ್ಕಲ್ಲ ಎಂಬ ಭಯ; ಸೋಮಣ್ಣ
ಬೆಂಗಳೂರು, ಬುಧವಾರ, 19 ಜನವರಿ 2011( 18:17 IST )
ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರಿಗೆ ಐದು ವರ್ಷಗಳ ಕಾಲ ಮುಂದುವರಿಯಲು ಅವಕಾಶ ಕೊಟ್ಟರೆ ಮುಂದೆ ತಮಗೆ ಪ್ರತಿಪಕ್ಷ ಸ್ಥಾನವೇ ಗತಿ ಎಂಬ ಭಯದಲ್ಲಿ ಕಾಂಗ್ರೆಸ್ ಮತ್ತು ಜೆಡಿಎಸ್ ಕುತಂತ್ರ ನಡೆಸುತ್ತಿರುವುದಾಗಿ ವಸತಿ ಸಚಿವ ವಿ.ಸೋಮಣ್ಣ ಆರೋಪಿಸಿದ್ದಾರೆ.
ಯಲಹಂಕದ ಸಿಂಗನಾಯಕನಹಳ್ಳಿಯಲ್ಲಿ ವಸತಿ ಇಲಾಖೆ ಮತ್ತು ರಾಜೀವ್ ಗಾಂಧಿ ಗ್ರಾಮೀಣ ವಸತಿ ನಿಗಮದ ವತಿಯಿಂದ ನಿರ್ಮಿಸಲಿರುವ ಮನೆಗಳಿಗೆ ಶಂಕುಸ್ಥಾಪನೆ ನೆರವೇರಿಸಿ ಮಾತನಾಡಿದ ಅವರು, ಯಡಿಯೂರಪ್ಪನವರ ಅಭಿವೃದ್ಧಿ ಕಾರ್ಯಗಳಿಂದ ಕಂಗಾಲಾಗಿರುವ ವಿಪಕ್ಷಗಳು ಅವರ ವಿರುದ್ಧ ಅನಾವಶ್ಯಕವಾಗಿ ಹಗರಣಗಳ ಆರೋಪ ಹೊರಿಸುತ್ತಿವೆ ಎಂದರು.
ಬಿಜೆಪಿಯ ಎಸ್.ಆರ್.ವಿಶ್ವನಾಥ್ ಶಾಸಕರಾದ ಮೇಲೆ ಕಳೆದ 60ವರ್ಷಗಳಿಂದ ಆಗದ ಅಭಿವೃದ್ಧಿ ಕೆಲಸ ಈಗ ಆಗಿದೆ. ಅದೇ ರೀತಿ ರಾಜ್ಯಾದ್ಯಂತ ಹಲವು ಅಭಿವೃದ್ದಿ ಕಾರ್ಯಗಳು ಆಗಿವೆ. ಇದರಿಂದಾಗಿ ಕಾಂಗ್ರೆಸ್, ಜೆಡಿಎಸ್ ಮುಖಂಡರು ಭೀತಿಗೆ ಒಳಗಾಗಿದ್ದು, ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಮತ್ತೆ ಜಯಭೇರಿ ಬಾರಿಸುತ್ತದೆ ಎಂದು ಸರಕಾರ ಉರುಳಿಸುವ ಸಂಚು ರೂಪಿಸುತ್ತಲೇ ಇದ್ದಾರೆ ಎಂದು ವಾಗ್ದಾಳಿ ನಡೆಸಿದರು.
ವಿಪಕ್ಷಗಳು ಏನೇ ತಿಪ್ಪರಲಾಗ ಹಾಕಿದರೂ ಬಿಜೆಪಿ ಸರಕಾರ ಕೆಡವಲು ಸಾಧ್ಯವಿಲ್ಲ. ರಾಜ್ಯದ ಜನರು ಬಿಜೆಪಿಗೆ ಆಶೀರ್ವಾದ ಮಾಡಿದ್ದಾರೆ. ಆ ನಿಟ್ಟಿನಲ್ಲಿ ಈ ಸರಕಾರ ಐದು ವರ್ಷಗಳ ಅವಧಿ ಪೂರ್ಣಗೊಳಿಸಲಿದೆ ಎಂದು ವಿಶ್ವಾಸವ್ಯಕ್ತಪಡಿಸಿದರು.