ಕೌಟುಂಬಿಕ ಕಲಹದಿಂದ ನೊಂದ ಮಹಿಳೆ ತನ್ನ ಇಬ್ಬರು ಮಕ್ಕಳನ್ನು ಕೊಂದು ನಂತರ ತಾನೂ ಆತ್ಮಹತ್ಯೆ ಮಾಡಿಕೊಂಡ ಹೃದಯ ವಿದ್ರಾವಕ ಘಟನೆ ಮಡಿವಾಳದಲ್ಲಿ ನಡೆದಿದೆ.
ಮೃತರನ್ನು ರಕ್ಷಿತಾ (4), ಆನಂದ್ (3) ಹಾಗೂ ತಾಯಿ ಸಾಲಮ್ಮ (38) ಎಂದು ಪೊಲೀಸರು ತಿಳಿಸಿದ್ದಾರೆ. ಮೂಲತಃ ತಮಿಳುನಾಡಿನ ತಳಿಯೂರು ನಿವಾಸಿ ಮುನಿವೆಂಕಟಸ್ವಾಮಿ ಅವರು ಮೊದಲ ಪತ್ನಿ ಲಕ್ಷ್ಮಮ್ಮ ಅವರ ಐದು ಮಂದಿ ಮಕ್ಕಳು ಹಾಗೂ 2ನೇ ಪತ್ನಿ ಸಾಲಮ್ಮ ಮತ್ತು ಇಬ್ಬರು ಮಕ್ಕಳ ಜತೆ ವಾಸವಾಗಿದ್ದರು.
ಮಡಿವಾಳದ ಹೊಂಗಸಂದ್ರದಲ್ಲಿ ಈ ಕುಟುಂಬ ವಾಸವಾಗಿದೆ. ಬುಧವಾರ ಲಕ್ಷ್ಮಮ್ಮ ಹೂ ಮಾರಲು ತೆರಳಿದ್ದರು. ಪತಿ ಮುನಿವೆಂಕಟಸ್ವಾಮಿ ಹೊರಗೆ ಹೋಗಿದ್ದರು. ಮೊದಲ ಪತ್ನಿ ಲಕ್ಷ್ಮಮ್ಮ ಹಾಗೂ ಸಾಲಮ್ಮ ಅಕ್ಕ-ತಂಗಿಯರು. ಇವರ ಮಧ್ಯೆ ಆಗಾಗ ಕೌಟುಂಬಿಕ ವಿಚಾರವಾಗಿ ಜಗಳ ನಡೆಯುತ್ತಿತ್ತು. ಇದರಿಂದ ಬೇಸತ್ತಿದ್ದ ಸಾಲಮ್ಮ ತನ್ನ ಇಬ್ಬರು ಮಕ್ಕಳನ್ನು ಸಾಯಿಸಿ, ನಂತರ ಆಕೆಯೂ ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಹೂ ಮಾರಲು ಹೋಗಿದ್ದ ಲಕ್ಷ್ಮಮ್ಮ ಮನೆಗೆ ವಾಪಸ್ ಆಗಿದ್ದ ವೇಳೆ ಈ ವಿಷಯ ಬೆಳಕಿಗೆ ಬಂದಿತ್ತು. ಮಕ್ಕಳನ್ನು ಉಸಿರುಗಟ್ಟಿಸಿ ಸಾಯಿಸಿರಬಹುದೇ ಅಥವಾ ವಿಷ ಕೊಟ್ಟು ಕೊಂದಿರಬಹುದೇ ಎಂಬುದು ಮರಣೋತ್ತರ ಪರೀಕ್ಷೆಯಿಂದ ತಿಳಿಯಲಿದೆ. ಪ್ರಕರಣ ದಾಖಲಿಸಿಕೊಂಡಿರುವ ಮಡಿವಾಳ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.