2009ರಲ್ಲಿ ನಡೆದ ಬಳ್ಳಾರಿ ಲೋಕಸಭೆ ಚುನಾವಣಾ ಅಕ್ರಮ ವ್ಯಾಜ್ಯಕ್ಕೆ ಸಂಬಂಧಿಸಿದಂತೆ ಷೋಕಾಸ್ ನೋಟಿಸ್ ಜಾರಿ ಮಾಡಿದರೂ ಅದಕ್ಕೆ ಸ್ಪಂದಿಸದೆ ವಾರಂಟ್ ಜಾರಿಗೆ ಕಾರಣವಾಗಿದ್ದ ಬಳ್ಳಾರಿ ಜಿಲ್ಲಾಧಿಕಾರಿ ಬಿ.ಶಿವಪ್ಪ ಬುಧವಾರ ಹೈಕೋರ್ಟ್‌ಗೆ ಹಾಜರಾಗಿ ಕ್ಷಮೆ ಯಾಚಿಸಿದ ಪ್ರಸಂಗ ನಡೆಯಿತು.
ಅಲ್ಲದೇ ಬಳ್ಳಾರಿ ಲೋಕಸಭೆ ಚುನಾವಣೆ ಸಂದರ್ಭದಲ್ಲಿ ಅಕ್ರಮ ನಡೆದಿದೆ ಎಂದು ಆರೋಪಿಸಿ ಸಂಸದೆ ಜೆ.ಶಾಂತಾ ವಿರುದ್ಧ ಸಲ್ಲಿಸಿರುವ ಚುನಾವಣಾ ತಕರಾರು ಅರ್ಜಿಗೆ ಸಂಬಂಧಿಸಿದಂತೆ ದಿನವಿಡೀ ನ್ಯಾ.ಎಚ್.ಬಿಲ್ಲಪ್ಪ ಅವರಿದ್ದ ಏಕಸದಸ್ಯ ಪೀಠದ ಮುಂದೆ ದಿನವಿಡೀ ಸಾಕ್ಷಿ ಹೇಳಿದರು.
ವಾರಂಟ್ ಜಾರಿಯಾದ ಹಿನ್ನೆಲೆಯಲ್ಲಿ ಖುದ್ದು ನ್ಯಾಯಾಲಯಕ್ಕೆ ಹಾಜರಾದ ಜಿಲ್ಲಾಧಿಕಾರಿ ಬಿ.ಶಿವಪ್ಪ, ಕೋರ್ಟ್‌ಗೆ ಅಗೌರವ ತೋರಿಸುವ ಉದ್ದೇಶ ತಮ್ಮದಾಗಿರಲಿಲ್ಲ. ಸಿಬ್ಬಂದಿಯ ನಿರ್ಲಕ್ಷ್ಯದಿಂದಾಗಿ ಷೋಕಾಸ್ ನೋಟಿಸ್ ಕೈಸೇರಿಲ್ಲ. ಇದಕ್ಕೆ ಸಂಬಂಧಿಸಿದಂತೆ ಇಬ್ಬರು ಸಿಬ್ಬಂದಿಯನ್ನು ಅಮಾನತುಗೊಳಿಸಲಾಗಿದೆ. ಆಗಿರುವ ಲೋಪಕ್ಕೆ ಕ್ಷಮೆಯಾಚಿಸುತ್ತೇನೆ ಎಂದು ಹೇಳಿದರು.