'ಅಕ್ರಮ ಅದಿರು ಸಾಗಾಟಕ್ಕೆ ಕಡಿವಾಣ ಹಾಕಿ, ಆದರೆ ಕಾನೂನು ಬದ್ಧ ಅದಿರು ರಫ್ತಿಗೆ ಅವಕಾಶ ಕೊಡಿ' ಎಂದು ಸುಪ್ರೀಂಕೋರ್ಟ್ ಕರ್ನಾಟಕ ಸರಕಾರಕ್ಕೆ ಗುರುವಾರ ನಿರ್ದೇಶನ ನೀಡಿದೆ.
ರಾಜ್ಯ ಸರಕಾರ ಜುಲೈ 27ರಂದು ಅದಿರು ರಫ್ತಿಗೆ ನಿಷೇಧ ಹೇರಿ ಆದೇಶ ಹೊರಡಿಸಿತ್ತು. ಏತನ್ಮಧ್ಯೆ ಸರಕಾರದ ಆದೇಶವನ್ನು ಪ್ರಶ್ನಿಸಿ ಅನಿಲ್ ಲಾಡ್, ಸಂತೋಷ್ ಲಾಡ್ ಸೇರಿದಂತೆ ಹಲವು ಗಣಿ ಕಂಪನಿ ಮಾಲೀಕರು ಸುಪ್ರೀಂಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಿದ್ದರು.
ಆ ನಿಟ್ಟಿನಲ್ಲಿ ಇಂದು ರಾಜ್ಯದ ಅದಿರು ರಫ್ತು ನಿಷೇಧದ ಅರ್ಜಿಯ ವಿಚಾರಣೆ ನಡೆಸಿದ ಸುಪ್ರೀಂ ಪೀಠ, ನೆಗಡಿಯಾದ್ರೆ ಮೂಗನ್ನೇ ಕತ್ತರಿಸುತ್ತೀರಾ? ಅದಕ್ಕೆ ಸೂಕ್ತ ಪರಿಹಾರ ಹುಡುಕುತ್ತೀರಿ. ಅದೇ ರೀತಿಯಲ್ಲಿ ಕಾನೂನು ಬದ್ಧವಾಗಿ ಗಣಿ ನಡೆಸುವವರಿಗೆ ಅದಿರು ರಫ್ತು ಮಾಡಲು ಅವಕಾಶ ಕೊಡಿ. ಅಕ್ರಮ ಗಣಿ ಮತ್ತು ಅದಿರು ರಫ್ತು ಬಗ್ಗೆ ಸೂಕ್ತ ಕ್ರಮಕೈಗೊಳ್ಳಿ ಎಂದು ರಾಜ್ಯ ಸರಕಾರಕ್ಕೆ ಸ್ಪಷ್ಟ ನಿರ್ದೇಶನ ನೀಡಿದೆ ಎಂದು ಗಣಿ ಕಂಪನಿ ಪರ ವಕೀಲ ಕೆ.ಎನ್.ಫಣೀಂದ್ರ ಅವರು ಸುದ್ದಿಗಾರರ ಜತೆ ಮಾತನಾಡುತ್ತ ತಿಳಿಸಿದ್ದಾರೆ.
ಅದಿರು ರಫ್ತು ವಿಚಾರದ ಕುರಿತಂತೆ ವಿವರ ನೀಡಲು 15 ದಿನಗಳ ಕಾಲಾವಕಾಶ ಸರಕಾರದ ಪರ ವಕೀಲರು ಕೋರಿದಾಗ, 15 ದಿನದೊಳಗೆ ಪ್ರಮಾಣ ಪತ್ರ ಸಲ್ಲಿಸುವಂತೆ ಸೂಚಿಸಿದೆ. ಅಲ್ಲದೇ ಅಕ್ರಮ ಅದಿರು ರಫ್ತು ನಿಷೇಧಿಸುವ ಬಗ್ಗೆ ಕೂಡಲೇ ನಿಯಮ ರೂಪಿಸಿ ಜಾರಿಗೆ ತರಬೇಕು ಎಂದು ತಾಕೀತು ಮಾಡಿ, ಮುಂದಿನ ವಿಚಾರಣೆಯನ್ನು ಫೆಬ್ರುವರಿ 2ನೇ ವಾರಕ್ಕೆ ಮುಂದೂಡಿದೆ.