ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಜ್ಯ ಸುದ್ದಿ » ಬಿಜೆಪಿ ಬೆದರಿಕೆಗೆ ಜಗ್ಗಲ್ಲ-ಇನ್ನೆರಡು ದಿನದಲ್ಲಿ ನಿರ್ಧಾರ: ಗವರ್ನರ್ (Yeddyurappa | prosecution | H.R. Bhardwaj | land scams)
Bookmark and Share Feedback Print
 
ರಾಜ್ಯ ಸರಕಾರದ ಬೆದರಿಕೆಗಳಿಗೆ ಹೆದರುವ ಪ್ರಶ್ನೆಯೇ ಇಲ್ಲ ಎಂದಿರುವ ರಾಜ್ಯಪಾಲ ಎಚ್.ಆರ್.ಭಾರದ್ವಾಜ್, ಭೂ ಹಗರಣಕ್ಕೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ವಿರುದ್ಧ ಮೊಕದ್ದಮೆ ದಾಖಲಿಸಬೇಕೆ ಅಥವಾ ಬೇಡವೇ ಎಂಬ ಬಗ್ಗೆ ಇನ್ನೆರಡು ದಿನದಲ್ಲಿ ಅಂತಿಮ ನಿರ್ಧಾರ ಕೈಗೊಳ್ಳುವುದಾಗಿ ಹೇಳಿದರು.

ನಗರದ ಜಸ್ಟೀಸ್ ಲಾಯರ್ ಫೋರಂ ಮುಖ್ಯಮಂತ್ರಿ ಯಡಿಯೂರಪ್ಪ ಅವರ ವಿರುದ್ಧ ಮೊಕದ್ದಮೆ ಹೂಡಲು ಅನುಮತಿ ನೀಡುವಂತೆ ಕೋರಿ ಮನವಿ ಸಲ್ಲಿಸಿದ್ದರು. ಈ ಮನವಿಗೆ ರಾಜ್ಯಪಾಲರು ಅನುಮತಿ ನೀಡಬಾರದು ಎಂದು ಬುಧವಾರ ಸಚಿವ ಸಂಪುಟ ಸಭೆಯಲ್ಲೇ ನಿರ್ಣಯ ಕೈಗೊಂಡ ಬೆನ್ನಲ್ಲೇ ರಾಜ್ಯಪಾಲರು ಗುರುವಾರ ಪುಸ್ತಕ ಬಿಡುಗಡೆ ಕಾರ್ಯಕ್ರಮದ ನಂತರ ಸುದ್ದಿಗಾರರ ಜತೆ ಮಾತನಾಡುತ್ತ ಈ ರೀತಿ ಪ್ರತಿಕ್ರಿಯೆ ವ್ಯಕ್ತಪಡಿಸಿದ್ದಾರೆ.

ಮುಖ್ಯಮಂತ್ರಿ ವಿರುದ್ಧ ಪ್ರಾಸಿಕ್ಯೂಷನ್‌ಗೆ ಅನುಮತಿ ಕೊಟ್ರೆ ರಾಜ್ಯ ಬಂದ್ ಮಾಡ್ತೇವೆ, ಅನುಮತಿ ನೀಡಬಾರದು ಎಂದು ನಿರ್ಣಯ ಕೈಗೊಳ್ಳುವುದು ಇಂತಹ ಬೆದರಿಕೆಗಳಿಗೆಲ್ಲ ತಾನು ಹೆದರುವುದಿಲ್ಲ ಎಂದು ಹೇಳುವ ಮೂಲಕ ಆಡಳಿತಾರೂಢ ಬಿಜೆಪಿ ಮತ್ತು ಗವರ್ನರ್ ನಡುವಿನ ಜಂಗೀಕುಸ್ತಿ ಮುಂದುವರಿದಂತಾಗಿದೆ.

ಏತನ್ಮಧ್ಯೆ ಮುಖ್ಯಮಂತ್ರಿ ವಿರುದ್ಧ ಪ್ರಾಸಿಕ್ಯೂಷನ್‌ಗೆ ಅನುಮತಿ ನೀಡಿದಲ್ಲಿ ಗವರ್ನರ್ ವಿರುದ್ಧ ಪ್ರತಿಭಟನೆ ಮತ್ತು ರಾಜ್ಯಾದ್ಯಂತ ಬಂದ್‌ಗೆ ಕರೆ ನೀಡುವುದಾಗಿ ಭಾರತೀಯ ಜನತಾ ಪಕ್ಷ ಎಚ್ಚರಿಕೆ ನೀಡಿದೆ.

ಬಿಜೆಪಿಯವರ ವರ್ತನೆ ನೋಡಿದರೆ ಕಳ್ಳನೇ ಪೊಲೀಸ್‌ನವರನ್ನು ಹೆದರಿಸೋ ರೀತಿ ಇದೆ ಎಂದು ಭಾರತೀಯ ಜನತಾ ಪಕ್ಷದ ಬೆದರಿಕೆ ಕುರಿತು ಸುದ್ದಿಗಾರರು ಕೇಳಿದ ಪ್ರಶ್ನೆಯೊಂದಕ್ಕೆ ರಾಜ್ಯಪಾಲರು ಈ ರೀತಿ ತಿರುಗೇಟು ನೀಡಿದರು.

ಇವೆಲ್ಲವೂ ಇಂದಿನ ರಾಜಕೀಯದ ತಂತ್ರಗಾರಿಕೆ. ಆದರೆ ನಾನು ಮಾತ್ರ ಇದಕ್ಕೆಲ್ಲಾ ಸೊಪ್ಪು ಹಾಕಲ್ಲ ಎಂದರು. ನಾನು ರಾಜ್ಯಪಾಲನಾಗಿ ಸಂವಿಧಾನ ಬದ್ಧವಾಗಿ ಕಾರ್ಯನಿರ್ವಹಿಸುತ್ತಿದ್ದೇನೆ. ಹಾಗಾಗಿ ಹಗರಣದ ಕುರಿತು ಮುಖ್ಯಮಂತ್ರಿ ವಿರುದ್ಧ ಮೊಕದ್ದಮೆ ದಾಖಲಿಸಲು ಅನುಮತಿ ನೀಡಿ ಎಂದು ವಕೀಲರು ಮನವಿ ಸಲ್ಲಿಸಿದ್ದಾರೆ. ನಾನು ಅದನ್ನು ಪರಿಗಣನೆಗೆ ತೆಗೆದುಕೊಂಡಿದ್ದೇನೆ. ಆ ಬಗ್ಗೆ ಇನ್ನೆರಡು ದಿನದಲ್ಲಿ ಅಂತಿಮ ನಿರ್ಧಾರ ಕೈಗೊಳ್ಳುವುದಾಗಿ ಹೇಳಿದರು.

ಬುಧವಾರ ಸಚಿವ ಸಂಪುಟ ಸಭೆ ಕೈಗೊಂಡ ನಿರ್ಣಯವಾಗಲಿ ಅಥವಾ ಯಡಿಯೂರಪ್ಪ ಬರೆದಿರುವ ಪತ್ರದಲ್ಲಿ ಏನೊಂದು ವಿಶೇಷತೆ ಇಲ್ಲ. ಭೂ ಹಗರಣದ ಬಗ್ಗೆ ಲೋಕಾಯುಕ್ತ ಮತ್ತು ನ್ಯಾ.ಪದ್ಮರಾಜ್ ನೇತೃತ್ವದ ಆಯೋಗ ತನಿಖೆ ನಡೆಸುತ್ತಿದೆ ಎಂದು ತಿಳಿಸಿದ್ದಾರೆ. ಇದರಲ್ಲಿ ವಿಶೇಷ ಏನು ಇದೆ ಎಂದು ಪ್ರಶ್ನಿಸಿದರು.

ಭೂ ಹಗರಣದ ಬಗ್ಗೆ ಲೋಕಾಯುಕ್ತ ಮತ್ತು ನಿವೃತ್ತ ನ್ಯಾ.ಪದ್ಮರಾಜ್ ನೇತೃತ್ವದ ಆಯೋಗ ತನಿಖೆ ನಡೆಸುತ್ತಿದೆ. ಆ ನಿಟ್ಟಿನಲ್ಲಿ ಯಡಿಯೂರಪ್ಪ ವಿರುದ್ಧ ರಾಜ್ಯಪಾಲ ಹಂಸರಾಜ್ ಭಾರದ್ವಾಜ್ ಅವರು ಮೊಕದ್ದಮೆಗೆ ಅನುಮತಿ ನೀಡಬಾರದು ಎಂದು ಬುಧವಾರ ನಡೆದ ಸಚಿವ ಸಂಪುಟ ಸಭೆಯಲ್ಲಿ ನಿರ್ಣಯ ಕೈಗೊಂಡಿತ್ತು.

ಮುಖ್ಯಮಂತ್ರಿ ವಿರುದ್ಧ ಜಸ್ಟೀಸ್ ಲಾಯರ್ ಫೋರಂ ನೂರಾರು ದಾಖಲೆ ಸಹಿತ ಮನವಿ ಸಲ್ಲಿಸಿದ್ದಾರೆ. ಆ ನಿಟ್ಟಿನಲ್ಲಿಯೇ ನಾನು ಪ್ರಕರಣಕ್ಕೆ ಸಂಬಂಧಿಸಿದಂತೆ ಸರಕಾರ ಜನವರಿ 20ರೊಳಗೆ ದಾಖಲಾತಿಯನ್ನು ನೀಡಬೇಕೆಂದು ಗಡುವು ನೀಡಿದ್ದೇನೆ. ಆದರೆ ಈವರೆಗೂ ನನಗೆ ಯಾವುದೇ ದಾಖಲಾತಿ ತಲುಪಿಲ್ಲ. ನಾನು ಕೊಟ್ಟ ಗಡುವು ಕೂಡ ಮುಕ್ತಾಯಗೊಂಡಿದೆ ಎಂದು ಭಾರದ್ವಾಜ್ ತಿಳಿಸಿದರು.

ಜಸ್ಟೀಸ್ ಲಾಯರ್ ಫೋರಂ ಡಿಸೆಂಬರ್ 28ರಂದು ಮುಖ್ಯಮಂತ್ರಿ ವಿರುದ್ಧ ಮೊಕದ್ದಮೆ ದಾಖಲಿಸಲು ಅನುಮತಿ ನೀಡಬೇಕೆಂದು ಕೋರಿ ರಾಜ್ಯಪಾಲರಿಗೆ ಮನವಿ ಸಲ್ಲಿಸಿದ್ದ ನಂತರ, ಈ ಬಗ್ಗೆ ಸರಕಾರದಿಂದ ವಿವರಣೆ ಪಡೆದು ತೀರ್ಮಾನ ಕೈಗೊಳ್ಳುವುದಾಗಿ ಹೇಳಿದ್ದರು. ಒಂದು ವೇಳೆ ಸರಕಾರ ತನಗೆ ಸರಿಯಾದ ಮಾಹಿತಿ ನೀಡದಿದ್ದಲ್ಲಿ ಜನವರಿ 26ರ ನಂತರ ಪ್ರಾಸಿಕ್ಯೂಷನ್‍‌ಗೆ ಅನುಮತಿ ನೀಡುವುದಾಗಿ ರಾಜ್ಯಪಾಲರು ಹೇಳಿರುವುದು ರಾಜ್ಯರಾಜಕಾರಣದಲ್ಲಿ ತೀವ್ರ ಆತಂಕಕ್ಕೆ ಎಡೆಮಾಡಿಕೊಡಲು ಕಾರಣವಾಗಿದೆ.
ಸಂಬಂಧಿತ ಮಾಹಿತಿ ಹುಡುಕಿ