ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಪ್ರಾಮಾಣಿಕರಾಗಿದ್ದರೆ, ವಕೀಲರ ಫೋರಂ ಮನವಿಗೆ ಅಂಜುವುದು ಏಕೆ ಎಂದು ವಿಧಾನ ಸಭೆ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಪ್ರಶ್ನಿಸಿದ್ದಾರೆ.
'ಮುಖ್ಯಮಂತ್ರಿ ವಿರುದ್ಧ ಪ್ರಾಸಿಕ್ಯೂಷನ್ ಹೂಡಲು ವಕೀಲರ ಫೋರಂ ರಾಜ್ಯಪಾಲರಿಗೆ ಮನವಿ ಸಲ್ಲಿಸಿರುವುದರಲ್ಲಿ ಹಾಗೂ ಅದಕ್ಕೆ ರಾಜ್ಯಪಾಲರು ಸಕಾರಾತ್ಮಕವಾಗಿ ಸ್ಪಂದಿಸಿರುವುದರಲ್ಲಿ ತಪ್ಪಿಲ್ಲ. ಯಡಿಯೂರಪ್ಪ ಪ್ರಾಮಾಣಿಕರಾಗಿದ್ದರೆ, ತನಿಖೆಗೆ ಸಹಕರಿಸಲಿ' ಎಂದು ಮೈಸೂರಿನಲ್ಲಿ ಸುದ್ದಿಗಾರರ ಜತೆ ಮಾತನಾಡುತ್ತ ತಿಳಿಸಿದರು.
ಮುಖ್ಯಮಂತ್ರಿ ವಿರುದ್ಧ ತನಿಖೆಗೆ ಅವಕಾಶ ನೀಡಬಾರದೆಂಬ ಸಚಿವ ಸಂಪುಟದ ತೀರ್ಮಾನವನ್ನು ಟೀಕಿಸಿದ ಸಿದ್ದು, ಇಂಥ ವಿಷಯಗಳನ್ನು ಸಂಪುಟದಲ್ಲಿ ಚರ್ಚಿಸಲು ಬರುವುದಿಲ್ಲ. ಅಪರಾಧಿ ವಿರುದ್ಧ ಕ್ರಮ ಬೇಡ ಎಂದು ಸಂಪುಟ ನಿರ್ಧಾರ ತೆಗೆದುಕೊಂಡರೆ, ಕಾನೂನು ಅದನ್ನು ಒಪ್ಪುವುದೇ ಎಂದು ಪ್ರಶ್ನಿಸಿದರು.
ಯಡಿಯೂರಪ್ಪ ವಿರುದ್ಧ ಸೂಕ್ತ ಆರೋಪಗಳಿದ್ದರೆ, ತನಿಖೆ ನಡೆಯಲಿ. ರಾಜ್ಯಪಾಲರಿಗೆ ಕಾನೂನಿನ ಅರಿವಿದೆ. ಕೇಂದ್ರದಲ್ಲಿ ಕಾನೂನು ಸಚಿವರಾಗಿದ್ದವರು. ಹಾಗಾಗಿ ಅವರ ತೀರ್ಮಾನ ಸೂಕ್ತವಾಗಿರುತ್ತದೆ. ಬಿಜೆಪಿಯವರು ರಾಜ್ಯಪಾಲರ ಮೇಲೆ ಒತ್ತಡದ ತಂತ್ರ ಅನುಸರಿಸುತ್ತಿದ್ದರು. ಇಂಥ ಯಾವುದೇ ಒತ್ತಡಕ್ಕೂ ರಾಜ್ಯಪಾಲರು ಮಣಿಯಬಾರದು. ಈ ವಿಷಯದಲ್ಲಿ ರಾಷ್ಟ್ರಪತಿಗಳು ಮಧ್ಯಪ್ರವೇಶಿಸಲಾರರು ಎಂದರು.