ಶಂಕರಾಚಾರ್ಯ, ರಾಮಾನುಜ ಹಾಗೂ ಮಧ್ವಾಚಾರ್ಯರು ಅಸ್ಪೃಶ್ಯತೆಯ ಪೋಷಕರಾಗಿದ್ದು, ಶಾಲಾ ಪಠ್ಯದಿಂದ ಇವರ ವಿಷಯವನ್ನು ಕೈಬಿಡಬೇಕು ಎಂದು ವಿಮರ್ಶಕ ಪ್ರೊ.ಕೆ.ಎಸ್.ಭಗವಾನ್ ಹೇಳಿದರು.
ತುಮಕೂರು ವಿವಿ ಪರಿಶಿಷ್ಟ ಜಾತಿ-ವರ್ಗದ ಕಾಲೇಜು ಅಧ್ಯಾಪಕರ ಕ್ಷೇಮಾಭಿವೃದ್ಧಿ ಸಂಘದ ವತಿಯಿಂದ ವಿವಿ ಕಾಲೇಜು ಸಭಾಂಗಣದಲ್ಲಿ ಆಯೋಜಿಸಿದ್ದ ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಮಾತನಾಡಿ, ಶಂಕರಚಾರ್ಯರು ಬ್ರಹ್ಮಸೂತ್ರ ಭಾಷ್ಯದಲ್ಲಿ ಶೂದ್ರರಿಗೆ ಅಧಿಕಾರ ಕೊಡಬಾರದು, ಕೆಳವರ್ಗದವರು ಜ್ಞಾನವಂತರಾದರೆ ಅವರ ನಾಲಿಗೆ ಕತ್ತರಿಸಬೇಕು, ಕಿವಿಗೆ ಕಾದ ಎಣ್ಣೆ ಸುರಿಯಬೇಕು ಎಂದು ಬರೆದಿದ್ದಾರೆ.
ಮಧ್ವಾಚಾರ್ಯರು ಸಹ ಕೆಳ ವರ್ಗದವರನ್ನು ನಿತ್ಯ ನಾರಕಿಗಳು, ಮೇಲ್ವರ್ಗದವರು ನಿತ್ಯಮುಕ್ತರು ಎಂದು ಸಂಬೋದಿಸಿದ್ದು, ಅಸ್ಪೃಶ್ಯತೆಯನ್ನು ಪೋಷಿಸಿಕೊಂಡು ಬಂದ ಇಂತಹವರ ಪಠ್ಯ ಮಕ್ಕಳಿಗೆ ಅಗತ್ಯವೇ ಎಂದು ಪ್ರಶ್ನಿಸಿದರು.
ನಾಡಗೀತೆಯಲ್ಲೂ ಈ ಮೂವರ ಹೆಸರು ಅಗತ್ಯವಿಲ್ಲ. ಶಂಕರಚಾರ್ಯರು ಕೆಳವರ್ಗದವರನ್ನು ಕುರಿತು ಆಡಿರುವ ಮಾತುಗಳ ಬಗ್ಗೆ ಕುವೆಂಪು ಅವರೇ ವಿಷಾದ ವ್ಯಕ್ತಪಡಿಸಿದ್ದರು ಎಂದರು.
ಸ್ವಾಮಿ ವಿವೇಕಾನಂದರು ಅಂಬೇಡ್ಕರ್‌ಗಿಂತ ಪ್ರಬಲವಾಗಿ ಅಸ್ಪೃಶ್ಯತೆಯನ್ನು ವಿರೋಧಿಸಿದ್ದರು. ವಿವೇಕಾನಂದರು ಹಿಂದೂ ಧರ್ಮದಷ್ಟು ಮಾನವೀಯತೆಯ ಧರ್ಮ ಮತ್ತೊಂದಿಲ್ಲ ಎಂದು ಪ್ರಸ್ತಾಪಿಸುತ್ತಲೇ ಹಿಂದೂ ಧರ್ಮದಲ್ಲಿನ ಮೇಲ್ವರ್ಗ-ಕೆಳವರ್ಗದ ನೀತಿ ಈ ಧರ್ಮದ ಮಾನವೀಯತೆ ತತ್ವವನ್ನು ಹಾಳು ಮಾಡಿದೆ. ಯಾವ ಧರ್ಮ ಶೋಷಿತರ ಬಗ್ಗೆ ಕರುಣೆ ವ್ಯಕ್ತಪಡಿಸುತ್ತದೋ ಅದೇ ನಿಜವಾದ ಧರ್ಮ ಎಂದು ಹೇಳಿದ್ದರು. ನಿಜವಾದ ಅರ್ಥದಲ್ಲಿ ಸ್ವಾಮಿ ವಿವೇಕಾನಂದ ಭಾರತದ ಮೊದಲ, ಪ್ರಮುಖ ಅಸ್ಪೃಶ್ಯತಾ ವಿರೋಧಕರಾಗಿದ್ದರು. ಹಾಗೆಯೇ 12ನೇ ಶತಮಾನದ ಶರಣ ಸಾಹಿತ್ಯ ಮಾನವೀಯತೆಯನ್ನು ಪ್ರತಿಪಾದಿಸುವ ಸಾಹಿತ್ಯ ಎಂದು ಬಣ್ಣಿಸಿದರು.