ಮುಖ್ಯಮಂತ್ರಿ ಹಾಗೂ ಗೃಹ ಸಚಿವ ಅಶೋಕ್ ವಿರುದ್ಧ ಮೊಕದ್ದಮೆ ಅವಕಾಶ ನೀಡಬಾರದು ಎಂದು ರಾಜ್ಯಪಾಲ ಹಂಸರಾಜ್ ಭಾರದ್ವಾಜ್ ವಿರುದ್ಧ ನಿರ್ಣಯ ಕೈಗೊಂಡಿರುವುದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರ ರಣಹೇಡಿ ನಿರ್ಧಾರ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಗುರುವಾರ ಅರಮನೆ ಆವರಣದಲ್ಲಿ ನಡೆದ ಜೆಡಿಎಸ್ ರಾಷ್ಟ್ರೀಯ ಮಹಾಧಿವೇಶನದಲ್ಲಿ ಮಾತನಾಡಿದ ಅವರು, ರಾಜ್ಯಪಾಲರ ವಿರುದ್ಧ ಈ ರೀತಿಯ ನಿರ್ಣಯವನ್ನು ರಾಷ್ಟ್ರದ 60ಕ್ಕೂ ಅಧಿಕ ವರ್ಷದ ಪ್ರಜಾಪ್ರಭುತ್ವದ ವ್ಯವಸ್ಥೆಯಲ್ಲಿ ಇದೇ ಮೊದಲ ಪ್ರಕರಣವಾಗಿದೆ ಎಂದರು.
ಅಷ್ಟೇ ಅಲ್ಲ ಮುಖ್ಯಮಂತ್ರಿಗಳ ವಿರುದ್ಧ ರಾಜ್ಯಪಾಲರು ಪ್ರಾಸಿಕ್ಯೂಷನ್‌ಗೆ ಅವಕಾಶ ಕೊಟ್ಟರೆ ರಾಜ್ಯ ಬಂದ್‌ಗೆ ಕರೆ ನೀಡುವುದಾಗಿ ಬಿಜೆಪಿ ಹೇಳಿಕೆ ನೀಡಿದೆ. ಆದರೆ ಬಿಜೆಪಿ ಯಾವ ಪುರುಷಾರ್ಥಕ್ಕಾಗಿ ರಾಜ್ಯ ಬಂದ್ ಮಾಡಬೇಕೆಂದು ಬಿಜೆಪಿ ಮುಖಂಡರನ್ನು ಪ್ರಶ್ನಿಸಿರುವ ಕುಮಾರಸ್ವಾಮಿ, ಒಂದು ವೇಳೆ ಜ.27ರಂದು ರಾಜ್ಯ ಬಂದ್ ನಡೆಸಿದರೆ, ಅದನ್ನು ಜೆಡಿಎಸ್ ಕಾರ್ಯಕರ್ತರು ಸಂಪೂರ್ಣವಾಗಿ ವಿಫಲಗೊಳಿಸಬೇಕು ಎಂದು ಕರೆ ನೀಡಿದರು.
ರಾಜ್ಯಪಾಲರ ವಿರುದ್ಧವೇ ನಿರ್ಣಯ ಕೈಗೊಳ್ಳುವ ಮೂಲಕ ರಾಜ್ಯ ಸರಕಾರ ಬೆದರಿಕೆ ಹಾಗೂ ಎಚ್ಚರಿಕೆ ನೀಡುವ ತಂತ್ರವನ್ನು ಅನುಸರಿಸುತ್ತಿದೆ ಎಂದು ವಾಗ್ದಾಳಿ ನಡೆಸಿದರು. ತಾವು ತಪ್ಪು ಮಾಡಿಲ್ಲ ಎಂದಾದರೆ ಪ್ರಾಸಿಕ್ಯೂಷನ್‌ಗೆ ಅನುಮತಿ ನೀಡದಂತೆ ಪರೋಕ್ಷವಾಗಿ ಮುಖ್ಯಮಂತ್ರಿಗಳು ಒತ್ತಡ ಹೇರುತ್ತಿದ್ದಾರೆ. ಮತ್ತೊಂದೆಡೆ ದೆಹಲಿಗೆ ಭೇಟಿ ನೀಡಿ ಪಕ್ಷದ ವರಿಷ್ಠರ ಸಲಹೆ ಪಡೆದು ಬರುತ್ತಾರೆ ಎಂದು ಟೀಕಿಸಿದರು.
ಜೆಡಿಎಸ್ ರಾಷ್ಟ್ರಾಧ್ಯಕ್ಷರಾಗಿ ದೇವೇಗೌಡ ಪುನರಾಯ್ಕೆ; ಇಂದು ನಡೆದ ಜೆಡಿಎಸ್ ಮಹಾಧಿವೇಶನದಲ್ಲಿ ಪಕ್ಷದ ರಾಷ್ಟ್ರೀಯ ಅಧ್ಯಕ್ಷರಾಗಿ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಅವರನ್ನು ಪುನರಾಯ್ಕೆ ಮಾಡಲಾಗಿದೆ. ರಾಷ್ಟ್ರೀಯ ಅಧ್ಯಕ್ಷರ ಆಯ್ಕೆಗೆ ಸಂಬಂಧಿಸಿದಂತೆ ಗೌಡರನ್ನು ಹೊರತುಪಡಿಸಿ ಬೇರೆ ಯಾರೂ ನಾಮಪತ್ರ ಸಲ್ಲಿಸದೆ ಇದ್ದ ಹಿನ್ನೆಲೆಯಲ್ಲಿ ದೇವೇಗೌಡರು ಸರ್ವಾನುಮತದಿಂದ, ಅವಿರೋಧವಾಗಿ ಆಯ್ಕೆಯಾಗಿರುವುದಾಗಿ ಚುನಾವಣಾಧಿಕಾರಿ ಸಿದ್ದಿಕಿ ರಾಷ್ಟ್ರೀಯ ಮಹಾಧಿವೇಶನದಲ್ಲಿ ಪ್ರಕಟಿಸಿದರು.
ಈ ಸಂದರ್ಭದಲ್ಲಿ ಪಕ್ಷದ ಹಿರಿಯ ಮುಖಂಡರು, ಕಾರ್ಯಕರ್ತರು ಭಾರೀ ಸಂಖ್ಯೆಯಲ್ಲಿ ಆಗಮಿಸಿ ಗೌಡರಿಗೆ ಹಾರ ಹಾಕಿ ಅಭಿನಂದನೆ ಸಲ್ಲಿಸಿದರು.
ಮುಖ್ಯಮಂತ್ರಿ ಬಿಎಸ್‌ವೈಗೆ ವಕೀಲರ ಸಾಥ್; ರಾಜ್ಯಪಾಲ ಹಂಸರಾಜ್ ಭಾರದ್ವಾಜ್ ಅವರು ಯಾವುದೇ ಕಾರಣಕ್ಕೂ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ವಿರುದ್ಧ ಮೊಕದ್ದಮೆ ದಾಖಲಿಸಲು ಅನುಮತಿ ನೀಡಬಾರದು ಎಂದು ಒತ್ತಾಯಿಸಿ ನಗರದಲ್ಲಿ ನೂರಾರು ವಕೀಲರು ಗುರುವಾರ ಪ್ರತಿಭಟನೆ ನಡೆಸಿದರು. ನಾವು ಯಾವುದೇ ಪಕ್ಷದ ಅಥವಾ ವ್ಯಕ್ತಿಯ ಪರವಾಗಿ ಹೋರಾಟ ನಡೆಸುತ್ತಿಲ್ಲ, ರಾಜ್ಯದಲ್ಲಿ ಸಾಂವಿಧಾನಿಕ ಬಿಕ್ಕಟ್ಟು ಉದ್ಭವಿಸಬಾರದು ಎಂಬ ದೃಷ್ಟಿಯಲ್ಲಿ ಪ್ರತಿಭಟನೆ ನಡೆಸಿರುವುದಾಗಿ ವಕೀಲರು ತಿಳಿಸಿದ್ದಾರೆ.