ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಜ್ಯ ಸುದ್ದಿ » ಕ್ರಮ ಕೈಗೊಳ್ಳೋ ಅಧಿಕಾರ ನನಗಿದೆ; ಸಿಎಂಗೆ ಗವರ್ನರ್ ಪತ್ರ (BJP | Yeddyurappa | Bharadwaj | Congress | Supreme court)
Bookmark and Share Feedback Print
 
ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹಾಗೂ ರಾಜ್ಯಪಾಲ ಎಚ್.ಆರ್.ಭಾರದ್ವಾಜ್ ನಡುವಿನ ಪತ್ರ ಸಮರ ಮುಂದುವರಿದಿದ್ದು, ರಾಜ್ಯಪಾಲನಾಗಿ ಸಂವಿಧಾನದ ಚೌಕಟ್ಟಿನಲ್ಲಿ ಕ್ರಮ ಕೈಗೊಳ್ಳುವ ಅಧಿಕಾರ ನನಗಿದೆ. ಆದರೆ ಪ್ರಾಸಿಕ್ಯೂಷನ್‌ಗೆ ಅನುಮತಿ ನೀಡುವುದು ಬೇಡ ಎಂದು ಸಂಪುಟದಲ್ಲಿ ನಿರ್ಣಯ ಕೈಗೊಂಡು ನನಗೆ ಕಳುಹಿಸೋ ಅಗತ್ಯವಿರಲಿಲ್ಲ ಎಂದು ರಾಜ್ಯಪಾಲ ಭಾರದ್ವಾಜ್ ಅವರು ಸಿಎಂಗೆ ಬರೆದಿರುವ ಪತ್ರದಲ್ಲಿ ತಿರುಗೇಟು ನೀಡಿದ್ದಾರೆ.

ಬಿಜೆಪಿ ಮುಖಂಡರ ನಡವಳಿಕೆ ಕಳ್ಳನೇ ಪೊಲೀಸರನ್ನು ಹೆದರಿಸೋ ರೀತಿಯಲ್ಲಿದೆ ಎಂದು ರಾಜ್ಯಪಾಲ ಭಾರದ್ವಾಜ್ ಗುರುವಾರ ನೀಡಿದ್ದ ಹೇಳಿಕೆಯನ್ನು ಖಂಡಿಸಿ ಮುಖ್ಯಮಂತ್ರಿ ಯಡಿಯೂರಪ್ಪ ನಿನ್ನೆ ರಾತ್ರಿಯೇ ಪತ್ರ ಬರೆದಿದ್ದರು. ತಾವು ಜವಾಬ್ದಾರಿಯುತ ಹುದ್ದೆಯಲ್ಲಿರುವವರು ಆಡಳಿತಾರೂಢ ಸರಕಾರದ ವಿರುದ್ಧ ಬೇಜವಾಬ್ದಾರಿತನದ ಹೇಳಿಕೆ ನೀಡುವುದು ಸರಿಯಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದ್ದರು.

ಇದೀಗ ಸಿಎಂ ಪತ್ರಕ್ಕೆ ರಾಜ್ಯಪಾಲರು ಪ್ರತಿಕ್ರಿಯೆ ನೀಡಿದ್ದು, ನಿಮ್ಮ ವಿರುದ್ಧದ ಭೂ ಹಗರಣಕ್ಕೆ ಸಂಬಂಧಿಸಿದಂತೆ ನಾನು ಡಿ.15ರಂದು ವಿವರ ಕೇಳಿದ್ದೆ. ನಂತರ ಡಿ.19ರಂದು ತಾವು ಪತ್ರ ಬರೆದು ಇವೆಲ್ಲವೂ ರಾಜಕೀಯ ಪ್ರೇರಿತ ಆರೋಪ ಎಂದು ಹೇಳಿ, ಹಗರಣದ ಬಗ್ಗೆ ನ್ಯಾ.ಪದ್ಮರಾಜ್ ಆಯೋಗ ತನಿಖೆ ನಡೆಸುತ್ತಿದೆ ಎಂದಷ್ಟೇ ತಿಳಿಸಿದ್ದೀರಿ. ಆದರೆ ಯಾವುದೇ ದಾಖಲೆಯನ್ನು ನೀವು ನನಗೆ ಕೊಟ್ಟಿರಲಿಲ್ಲವಾಗಿತ್ತು.

ತದನಂತರ ಡಿ.28ರಂದು ಜಸ್ಟೀಸ್ ಲಾಯರ್ ಫೋರಂನ ಸಿರಾಜಿನ್ ಭಾಷಾ, ಬಾಲರಾಜ್ ಅವರು ಭೂಹಗರಣಕ್ಕೆ ಸಂಬಂಧಿಸಿದಂತೆ ನಿಮ್ಮ (ಯಡಿಯೂರಪ್ಪ) ಹಾಗೂ ಗೃಹ ಸಚಿವ ಆರ್. ಅಶೋಕ್ ವಿರುದ್ಧ ವಿಶೇಷ ಕೋರ್ಟ್‌ನಲ್ಲಿ ಮೊಕದ್ದಮೆ ಹೂಡಲು ಅನುಮತಿ ನೀಡುವಂತೆ ಮನವಿ ಸಲ್ಲಿಸಿದ್ದರು. ಡಿಸೆಂಬರ್ 31ರಂದು ನೀವು ನನ್ನನ್ನು ಖುದ್ದಾಗಿ ಭೇಟಿಯಾಗಿದ್ದೀರಿ. ಆಗ ವಕೀಲರ ಸಂಘದ ಮನವಿ ಬಗ್ಗೆ ತಿಳಿಸಿ, ಕೂಡಲೇ ದಾಖಲೆ ಮತ್ತು ವಿವರ ನೀಡುವಂತೆ ಸೂಚಿಸಿದ್ದೇನೆ ಎಂದು ರಾಜ್ಯಪಾಲರು ಪತ್ರದಲ್ಲಿ ಉಲ್ಲೇಖಿಸಿದ್ದಾರೆ.

ಅಲ್ಲದೇ ವಕೀಲರ ಸಂಘದ ಮನವಿ ಬಗ್ಗೆ ಶೀಘ್ರವೇ ಉತ್ತರ ನೀಡಬೇಕಿದೆ. ಹಾಗಾಗಿ ತಾವು ಕೂಡಲೇ ದಾಖಲೆ ಸಹಿತ ವಿವರ ನೀಡಿ ಎಂದು ತಿಳಿಸಿದ್ದೆ. ನೀವು ನಾನು ಕೊಟ್ಟ ಗಡುವಿನವರೆಗೂ ಯಾವುದೇ ದಾಖಲೆಯನ್ನು ಕೊಟ್ಟಿಲ್ಲ. ಆ ನೆಲೆಯಲ್ಲಿ ರಾಜ್ಯಪಾಲನಾಗಿ ಸ್ವತಃ ನಿರ್ಣಯ ಕೈಗೊಳ್ಳುವ ಅಧಿಕಾರ ಇದೆ. ಆರೋಪ ನಿಜ ಎನಿಸಿದರೆ ಮುಖ್ಯಮಂತ್ರಿ ವಿರುದ್ಧ ಪ್ರಾಸಿಕ್ಯೂಷನ್‌ಗೆ ರಾಜ್ಯಪಾಲರು ಕ್ರಮ ಕೈಗೊಳ್ಳಬಹುದು ಎಂದು ಮಧ್ಯಪ್ರದೇಶದ ಪ್ರಕರಣವೊಂದರಲ್ಲಿ ಸುಪ್ರೀಂಕೋರ್ಟ್ ನೀಡಿರುವ ತೀರ್ಪನ್ನು ಕೂಡ ಪತ್ರದಲ್ಲಿ ಉಲ್ಲೇಖಿಸುವ ಮೂಲಕ ಆಡಳಿತಾರೂಢ ಬಿಜೆಪಿ ಮತ್ತು ಗವರ್ನರ ನಡುವಿನ ಸಂಘರ್ಷ ಅಂತಿಮ ಘಟ್ಟ ತಲುಪಿದಂತಾಗಿದೆ.

ಕ್ಷಮೆಯಾಚಿಸ್ಲಿ-ಸರಕಾರ ವಿಸರ್ಜನೆಗೆ ಗವರ್ನರ್ ಒತ್ತಡ;ಸಿಎಂ
ಸಂಬಂಧಿತ ಮಾಹಿತಿ ಹುಡುಕಿ