ಸಿಎಂ ವಿರುದ್ಧ ಮಾನನಷ್ಟ ಕೇಸ್ ಹಾಕ್ತೇನೆ: ರೇವಣ್ಣ ಎಚ್ಚರಿಕೆ
ಬೆಂಗಳೂರು, ಶುಕ್ರವಾರ, 21 ಜನವರಿ 2011( 18:30 IST )
ತಾವು ಕೆಎಂಎಫ್ ಅಧ್ಯಕ್ಷರಾಗಿದ್ದಾಗ 300ರಿಂದ 400 ಕೋಟಿ ರೂಪಾಯಿ ಅವ್ಯವಹಾರ ನಡೆದಿದೆ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಮಾಡಿರುವ ಆರೋಪವನ್ನು ಸಾಬೀತುಪಡಿಸಬೇಕು. ಇಲ್ಲದಿದ್ದಲ್ಲಿ ಅವರ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡುವುದಾಗಿ ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಎಚ್.ಡಿ.ರೇವಣ್ಣ ಎಚ್ಚರಿಕೆ ನೀಡಿದ್ದಾರೆ.
ಮುಖ್ಯಮಂತ್ರಿ ಯಡಿಯೂರಪ್ಪನವರು ಮಾಡಿರುವ ಆರೋಪಗಳ ಬಗ್ಗೆ ಅವರ ಬಳಿ ಏನಾದರೂ ದಾಖಲೆಗಳಿದ್ದರೆ 7 ದಿನಗಳಲ್ಲಿ ಬಹಿರಂಗಪಡಿಸಬೇಕು. ಅಷ್ಟರೊಳಗೆ ಸಾಬೀತುಪಡಿಸದಿದ್ದರೆ ಯಡಿಯೂರಪ್ಪ ಹಾಗೂ ಸಂಬಂಧಪಟ್ಟ ಅಧಿಕಾರಿಗಳ ವಿರುದ್ಧವೂ ಮಾನನಷ್ಟ ಮೊಕದ್ದಮೆ ಹೂಡುವುದಾಗಿ ಅವರು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
ಮೊಕದ್ದಮೆಯನ್ನು ಹೊಳೆನರಸೀಪುರದಲ್ಲಿ ಹೂಡಬೇಕೋ ಅಥವಾ ಬೇರೆ ನ್ಯಾಯಾಲಯದಲ್ಲಿ ಹೂಡಬೇಕೆ ಎಂಬುದನ್ನು ಪರಿಶೀಲಿಸಿ ನಿರ್ಧಾರಕ್ಕೆ ಬರುತ್ತೇನೆ ಎಂದರು.
ತಮ್ಮ ವಿರುದ್ಧ ಯಡಿಯೂರಪ್ಪನವರು ಮಾಡಿರುವ ಆರೋಪಗಳನ್ನು ಸಾಬೀತುಪಡಿಸಿದರೆ 5 ನಿಮಿಷವೂ ರಾಜಕಾರಣದಲ್ಲಿ ಇರುವುದಿಲ್ಲ, ಆರೋಪ ಸಾಬೀತು ಮಾಡದೆ ಹೋದರೆ ಯಡಿಯೂರಪ್ಪ ರಾಜಕೀಯ ನಿವೃತ್ತಿ ಪಡೆಯುವರೇ ಎಂದು ಅವರು ಆತ್ಮಾವಲೋಕನ ಮಾಡಿಕೊಳ್ಳಬೇಕು ಎಂದು ಹೇಳಿದರು. ಅಷ್ಟೇ ಅಲ್ಲ ಸುಳ್ಳು ಆರೋಪ ಮಾಡಿರುವ ಯಡಿಯೂರಪ್ಪ ಸಾರ್ವಜನಿಕರ ಕ್ಷಮೆ ಕೇಳಬೇಕೆಂದು ಒತ್ತಾಯಿಸಿದರು.