ಭ್ರಷ್ಟಾಚಾರದ ಆರೋಪದಡಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ವಿರುದ್ದ ಪ್ರಾಸಿಕ್ಯೂಷನ್‌ಗೆ ರಾಜ್ಯಪಾಲ ಹಂಸರಾಜ್ ಭಾರದ್ವಾಜ್ ಅವರು ಅನುಮತಿ ನೀಡಿದ ಬೆನ್ನಲ್ಲೇ, ವಕೀಲರಾದ ಸಿರಾಜ್ ಭಾಷಾ ಮತ್ತು ಬಾಲರಾಜ್ ಅವರು ಶನಿವಾರ ಮುಖ್ಯಮಂತ್ರಿ ವಿರುದ್ಧ ಲೋಕಾಯುಕ್ತ ವಿಶೇಷ ನ್ಯಾಯಾಲಯದಲ್ಲಿ ಎರಡು ಮೊಕದ್ದಮೆ ದಾಖಲಿಸಿದ್ದು, ದೂರನ್ನು ನ್ಯಾಯಾಧೀಶರು ಸ್ವೀಕರಿಸಿದ್ದಾರೆ. ಅಲ್ಲದೇ ಜ.24ರಂದು ವಿಚಾರಣೆ ನಡೆಸುವುದಾಗಿ ತಿಳಿಸಿದ್ದಾರೆ.
ಮುಖ್ಯಮಂತ್ರಿ ಯಡಿಯೂರಪ್ಪ ವಿರುದ್ಧ ಪ್ರಾಸಿಕ್ಯೂಷನ್‌ಗೆ ಅನುಮತಿ ಕೊಟ್ಟ ನಂತರ, ಮುಖ್ಯಮಂತ್ರಿಗಳು ಪ್ರಾಸಿಕ್ಯೂಷನ್ ಆದೇಶದ ಪ್ರತಿ ಕೊಡುವಂತೆ ಕೋರಿದ್ದರು. ಆದರೆ ರಾಜ್ಯಪಾಲರು ವಿಳಂಬ ಮಾಡಿದ್ದು, ಇಂದು ಮಧ್ಯಾಹ್ನ ಆದೇಶದ ಪ್ರತಿಯನ್ನು ಸಿಎಂ ಕಚೇರಿಗೆ ಫ್ಯಾಕ್ಸ್ ಮೂಲಕ ರವಾನಿಸಿದ್ದರು.
ಏತನ್ಮಧ್ಯೆ ತಮ್ಮ ವಾದವನ್ನು ಆಲಿಸದೆ ಮುಖ್ಯಮಂತ್ರಿಗಳ ವಿರುದ್ಧ ರಾಜ್ಯಪಾಲ ಹಂಸರಾಜ್ ಭಾರದ್ವಾಜ್ ಅವರ ಆದೇಶಕ್ಕೆ ತಡೆಯಾಜ್ಞೆ ನೀಡಬಾರದು ಎಂದು ವಕೀಲರಾದ ಸಿರಾಜ್ ಭಾಷಾ ಮತ್ತು ಬಾಲರಾಜ್ ಹೈಕೋರ್ಟ್‌ನಲ್ಲಿ ಕೇವಿಯಟ್ ಸಲ್ಲಿಸಿದ್ದರು.
ನಂತರ ಸಿರಾಜ್ ಮತ್ತು ಬಾಲರಾಜ್ ಅವರು ತಮ್ಮ ವಕೀಲರಾದ ಸಿ.ಎಚ್.ಹನುಮಂತರಾಯ ಅವರೊಡನೆ ನಗರದ ಲೋಕಾಯುಕ್ತ ವಿಶೇಷ ನ್ಯಾಯಾಲಯದಲ್ಲಿ ಇಬ್ಬರು ವಕೀಲರು ಎರಡು ಪ್ರತ್ಯೇಕ ಪ್ರಕರಣಗಳನ್ನು ದಾಖಲಿಸಿದರು.
ಇಂದು ದಾಖಲಾದ ಮೊದಲ ಪ್ರಕರಣದಲ್ಲಿ ,ಮೊದಲ ಆರೋಪಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, 2ನೇ ಆರೋಪಿ ವಿಜಯೇಂದ್ರ, 3ನೇ ಆರೋಪಿ ರಾಘವೇಂದ್ರ, 4ನೇ ಆರೋಪಿ ಸಿಎಂ ಅಳಿಯ ಸೋಹನ್ ಕುಮಾರ್, 5ನೇ ಆರೋಪಿ ಮಾಲೂರು ಶಾಸಕ ಕೃಷ್ಣಯ್ಯ ಸೆಟ್ಟಿ, ಹಾಗೂ 6ನೇ ಆರೋಪಿ ದವಳಗಿರಿ ಪ್ರಾಪರ್ಟಿಸ್ ಎಂದು ನಮೂದಿಸಿದ್ದಾರೆ. ಎರಡನೇ ಪ್ರಕರಣದಲ್ಲಿ ಒಟ್ಟು 15 ಜನ ಆರೋಪಿಗಳು, ಸಿಎಂ ಯಡಿಯೂರಪ್ಪ ಮೊದಲ ಆರೋಪಿ. ಇತರ 14 ಖಾಸಗಿ ವ್ಯಕ್ತಿಗಳ ವಿರುದ್ಧ ದೂರು ದಾಖಲಿಸಲಾಗಿದೆ.
ದಾಖಲಾದ ಪ್ರಕರಣವನ್ನು ವಿಚಾರಣೆಗೆ ಅಂಗಿಕರಿಸಿರುವುದಾಗಿ 23ನೇ ಹೆಚ್ಚುವರಿ ವಿಶೇಷ ನ್ಯಾಯಾಧೀಶ ಹಿಪ್ಪರಗಿ ಅವರು ತಿಳಿಸಿದ್ದು, ಜನವರಿ 24ರಂದು ವಿಚಾರಣೆಗೆ ಕೈಗೆತ್ತಿಕೊಳ್ಳುವುದಾಗಿ ತಿಳಿಸಿದ್ದಾರೆ.
ಮುಖ್ಯಮಂತ್ರಿಗಳ ವಿರುದ್ಧ ಒಟ್ಟು 18 ಮೊಕದ್ದಮೆ ದಾಖಲಿಸಲು ಸಿದ್ದತೆ ನಡೆಸಲಾಗಿದೆ. ಆ ನೆಲೆಯಲ್ಲಿ ಇಂದು ಎರಡು ಪ್ರಕರಣಗಳನ್ನು ದಾಖಲಿಸಲಾಗಿದ್ದು, ಸೋಮವಾರ ಮತ್ತೆ ಮೂರು ಪ್ರಕರಣ ದಾಖಲಿಸಲಾಗುವುದು ಎಂದು ಸಿರಾಜ್ ಮತ್ತು ಬಾಲರಾಜ್ ಪರ ವಕೀಲರಾದ ಸಿ.ಎಚ್.ಹನುಮಂತರಾಯ ಅವರು ವಿವರಿಸಿದ್ದಾರೆ.