'ಗವರ್ನರ್ ನನ್ನನ್ನು ಕಳ್ಳನೆಂದು ಜರೆದಿದ್ದು ಸರಿಯಲ್ಲ. ಈ ಹೇಳಿಕೆ ರಾಜ್ಯದ ಜನರನ್ನು ಕೆರಳಿಸಿದೆ. ಆ ನಿಟ್ಟಿನಲ್ಲಿ ಜನರೇ ಸ್ವಯಂ ಪ್ರೇರಿತರಾಗಿ ಶಾಂತಿಯುತವಾಗಿ ಬಂದ್ ನಡೆಸುವ ಮೂಲಕ ತಮ್ಮ ವಿರೋಧ ವ್ಯಕ್ತಪಡಿಸಿದ್ದಾರೆ. ಅದಕ್ಕಾಗಿ ನಾನು ರಾಜ್ಯದ ಜನತೆಗೆ ಕೃತಜ್ಞತೆ ಸಲ್ಲಿಸುತ್ತೇನೆ. ರಾಜ್ಯ ಸರಕಾರದ ಜನಪ್ರಿಯತೆ ಸಹಿಸಲು ಆಗದ ರಾಜ್ಯಪಾಲರು ಯುಪಿಎ ಏಜೆಂಟ್ ತರ ವರ್ತಿಸುತ್ತಿದ್ದಾರೆ' ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ತಿಳಿಸಿದ್ದಾರೆ.
ಶನಿವಾರ ಸಂಜೆ ಗೃಹಕಚೇರಿ ಕೃಷ್ಣಾದಲ್ಲಿ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು, ನನ್ನ ವಿರುದ್ಧದ ಭೂ ಹಗರಣದ ಆರೋಪದಡಿಯಲ್ಲಿ ಪ್ರಾಸಿಕ್ಯೂಷನ್‌ಗೆ ಅನುಮತಿ ನೀಡುವ ರಾಜ್ಯಪಾಲರ ಕ್ರಮಕ್ಕೆ ವಿಪಕ್ಷಗಳೇ ಕಾರಣ. ರಾಜ್ಯಪಾಲರೂ ಕೂಡ ವಿಪಕ್ಷ ನಾಯಕನಂತೆ ವರ್ತಿಸುತ್ತಿದ್ದಾರೆ. ಅಷ್ಟೇ ಅಲ್ಲ ರಾಜಭವನ ಪ್ರತಿಪಕ್ಷಗಳ ಕಚೇರಿಯಾಗಿದೆ ಎಂದು ವಾಗ್ದಾಳಿ ನಡೆಸಿದರು.
ರಾಜ್ಯದಲ್ಲಿ ನಡೆದ ಎಲ್ಲಾ ಚುನಾವಣೆಗಳಲ್ಲಿಯೂ ಜನರು ಬಿಜೆಪಿಯನ್ನು ಬೆಂಬಲಿಸಿದ್ದಾರೆ. ಆದರೆ ಸರಕಾರದ ಸಾಧನೆಯನ್ನು ಸಹಿಸಲು ರಾಜ್ಯಪಾಲರಿಗೆ ಆಗಿಲ್ಲ. ಅದಕ್ಕಾಗಿಯೇ ಕಾಂಗ್ರೆಸ್, ಜೆಡಿಎಸ್ ಏಜೆಂಟರಂತೆ ವರ್ತಿಸುತ್ತಿದ್ದಾರೆ ಎಂದರು.
ಭೂ ಹಗರಣಕ್ಕೆ ಸಂಬಂಧಿಸಿದಂತೆ ನನ್ನ ವಿರುದ್ಧದ ಪ್ರಾಸಿಕ್ಯೂಷನ್‌ಗೆ ಅನುಮತಿ ನೀಡೋ ಮೊದಲು ನನ್ನ ಅಭಿಪ್ರಾಯವನ್ನೂ ಕೇಳಿಲ್ಲ. ಅಲ್ಲದೇ ಪ್ರಾಸಿಕ್ಯೂಷನ್‌ಗೆ ಅನುಮತಿ ನೀಡಿದ ಮೇಲೂ ಅಧಿಕಾರಿಗಳಿಗೂ ಆದೇಶದ ಪ್ರತಿ ನೀಡಿಲ್ಲ. ವಕೀಲರ ದೂರಿನ ಪ್ರತಿಯನ್ನೂ ಕೊಟ್ಟಿಲ್ಲ. ಒಟ್ಟಾರೆಯಾಗಿ ರಾಜ್ಯಪಾಲರು ಸಾಂವಿಧಾನಿಕ ಹೊಣೆ ಮೀರಿ ವರ್ತಿಸಿದ್ದಾರೆ ಎಂದು ಆರೋಪಿಸಿದರು.
ಪ್ರಾಸಿಕ್ಯೂಷನ್‌ಗೆ ಅನುಮತಿ ನೀಡಿದ ನಂತರವೂ ಆದೇಶದ ಪ್ರತಿ ನೀಡಲು ವಿಳಂಬ ಮಾಡಿದ್ದಾರೆ. ಆದೇಶದ ಪ್ರತಿ ಕೇಳಿದ್ದಕ್ಕೆ ಕೋರ್ಟ್ ಮೂಲಕ ಬೇಕಾದ್ರೆ ಪಡೆದುಕೊಳ್ಳಿ ಎಂದು ಹೇಳಿದ್ದರು. ನಂತರ ಅದನ್ನು ಫ್ಯಾಕ್ಸ್ ಮೂಲಕ ಕಳುಹಿಸಿರುವುದಾಗಿ ಮುಖ್ಯಮಂತ್ರಿಗಳು ತಿಳಿಸಿದ್ದಾರೆ.
ಆದರೆ ನಾನು ಬೆನ್ನು ತೋರಿಸಿ ಓಡಿ ಹೋಗಲ್ಲ, ಕಾನೂನು ರೀತಿ ವಿಚಾರಣೆ ಎದುರಿಸುವೆ. ಅಲ್ಲದೇ ನಾನು ಪ್ರಾಮಾಣಿಕ ಎಂಬುದನ್ನು ಸಾಬೀತುಪಡಿಸುತ್ತೇನೆ. ಗವರ್ನರ್ ಅವರು ಗೌರವದಿಂದ ವರ್ತಿಸಲಿ ಎಂದು ಸಲಹೆ ನೀಡಿರುವ ಅವರು, ನಾನು ಸಮರಕ್ಕೂ ಸಿದ್ದನಾಗಿದ್ದೇನೆ. ನ್ಯಾಯಾಂಗದ ಮೇಲೆ ತನಗೆ ವಿಶ್ವಾಸ ಇರುವುದಾಗಿ ಈ ಸಂದರ್ಭದಲ್ಲಿ ಹೇಳಿದರು.