ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಜ್ಯ ಸುದ್ದಿ » ರಾಜ್ಯಪಾಲ ವಿರುದ್ಧವೇ ಕೇಸು, ಬೇರೆ ರಾಜ್ಯ ನೋಡಿಕೊಳ್ಳಲಿ: ಸಿಎಂ
(CM Yaddyurappa | HR Bharadwaj | Karnataka Politics | Defamation case against Governor)
ರಾಜ್ಯಪಾಲ ವಿರುದ್ಧವೇ ಕೇಸು, ಬೇರೆ ರಾಜ್ಯ ನೋಡಿಕೊಳ್ಳಲಿ: ಸಿಎಂ
ಬೆಂಗಳೂರು, ಸೋಮವಾರ, 24 ಜನವರಿ 2011( 11:23 IST )
ಕಾಂಗ್ರೆಸ್ ಪಕ್ಷದ ಮುಖವಾಣಿಯಂತೆ ವರ್ತಿಸಿ ತಮ್ಮ ವಿರುದ್ಧ ಕೇಸು ದಾಖಲಿಸಲು ಅನುಮತಿ ನೀಡಿದ್ದ ರಾಜ್ಯಪಾಲ ಹಂಸರಾಜ್ ಭಾರದ್ವಾಜ್ ವಿರುದ್ಧ ನೇರ ಕದನಕ್ಕಿಳಿದಿರುವ ಮುಖ್ಯಮಂತ್ರಿ ಯಡಿಯೂರಪ್ಪ, ಇದೀಗ ರಾಜ್ಯಪಾಲರ ವಿರುದ್ಧವೇ ಕೇಸು ದಾಖಲಿಸಲು ಚಿಂತನೆ ನಡೆಸಿದ್ದಾರಲ್ಲದೆ, ರಾಜ್ಯಪಾಲರು ಬೇರೆ ರಾಜ್ಯ ನೋಡಿಕೊಳ್ಳುವುದು ಒಳಿತು ಎಂದಿದ್ದಾರೆ.
ಭಾನುವಾರ ದೆಹಲಿಗೆ ಭೇಟಿ ನೀಡಿ ಕೇಂದ್ರೀಯ ನಾಯಕರೊಂದಿಗೆ ಮಾತುಕತೆ ನಡೆಸಿ ಬಂದಿರುವ ಮುಖ್ಯಮಂತ್ರಿ, ಎಲ್ಲ ರೀತಿಯ ಕಾನೂನು ಹೋರಾಟಕ್ಕೆ ಸಿದ್ಧವಾಗಿಯೇ ಬಂದಿರುವಂತೆ ಕಾಣಿಸುತ್ತಿದ್ದು, ರಾಜ್ಯಪಾಲರ ವಿರುದ್ಧ, ಪ್ರತಿಪಕ್ಷದ 'ಅಪ್ಪ ಮಕ್ಕಳ' ವಿರುದ್ಧ ನೇರ ಸಮರ ಘೋಷಿಸಿರುವುದರೊಂದಿಗೆ, ರಾಜ್ಯದ ರಾಜಕೀಯ ಮತ್ತೊಂದು ಆಸಕ್ತಿಕರ ತಿರುವು ಪಡೆದುಕೊಂಡಿದೆ.
ತಮ್ಮ ವಿರುದ್ಧ ಕೇಸು ದಾಖಲಿಸಲು ಅನುಮತಿ ನೀಡಿರುವ ರಾಜ್ಯಪಾಲರು, ತಮ್ಮ ಮತ್ತು ಸಚಿವ ಸಂಪುಟದ ವಿರುದ್ಧ ಅವಹೇಳನಕಾರಿ ಮಾತುಗಳನ್ನಾಡಿದ್ದಾರೆ. ಇದರಿಂದಾಗಿ ರಾಜ್ಯಾದ್ಯಂತ ಜನತೆ ರೊಚ್ಚಿಗೆದ್ದು ಸ್ವಯಂಪ್ರೇರಿತ ಬಂದ್ ನಡೆಸಿದ್ದರು. ಈ ಸಂದರ್ಭದಲ್ಲಿ ರಾಜ್ಯದಲ್ಲಿ ಅಪಾರ ನಷ್ಟವಾಗಿದೆ. ಈ ನಷ್ಟಕ್ಕೆ ರಾಜ್ಯಪಾಲರೇ ಹೊಣೆಯಾಗಿದ್ದಾರೆ. ಅಂತೆಯೇ ಅವಹೇಳನಕಾರಿ ಮಾತುಗಳನ್ನಾಡಿದ ರಾಜ್ಯಪಾಲರು ಕ್ಷಮೆ ಕೇಳದೇ ಇದ್ದರೆ, ಅವರ ವಿರುದ್ಧ ಮಾನ ನಷ್ಟ ಕೇಸು ದಾಖಲಿಸಲು ಯೋಚಿಸುತ್ತಿರುವುದಾಗಿಯೂ ಬೆಂಗಳೂರಿನಲ್ಲಿ ಯಡಿಯೂರಪ್ಪ ಸೋಮವಾರ ತಿಳಿಸಿದ್ದಾರೆ.
ಅಪ್ಪ-ಮಕ್ಕಳ ವಿರುದ್ಧ ಮತ್ತೆ ಹರಿಹಾಯ್ದ ಸಿಎಂ ಇದೇ ಸಂದರ್ಭದಲ್ಲಿ, ರಾಜ್ಯ ರಾಜಕೀಯದ 'ಅಪ್ಪ-ಮಕ್ಕಳು' (ದೇವೇಗೌಡ ಮತ್ತು ಅವರ ಮಕ್ಕಳ) ವಿರುದ್ಧವೂ ಹರಿಹಾಯ್ದ ಮುಖ್ಯಮಂತ್ರಿ, ಅವರ ಎಲ್ಲ ಭೂಹಗರಣಗಳನ್ನೂ ಒಂದೊಂದಾಗಿ ಬಯಲಿಗೆಳೆಯುವುದಾಗಿ ತಿಳಿಸಿದ್ದಾರಲ್ಲದೆ, ಅವರಿಗೂ ನೋಟೀಸ್ ನೀಡಲು ಚಿಂತಿಸುತ್ತಿರುವುದಾಗಿ ಹೇಳಿದರು.
ಇಂದು ಸಚಿವರೊಂದಿಗೆ ಪುಣೆಗೆ ಇದೇ ವೇಳೆ, ಕರ್ನಾಟಕದ ಪ್ರಖ್ಯಾತ ಹಿಂದೂಸ್ತಾನೀ ಸಂಗೀತ ಗಾಯಕ ಭೀಮಸೇನ್ ಜೋಶಿ ನಿಧನಕ್ಕೆ ಸಂತಾಪ ಸೂಚಿಸಿರುವ ಅವರು, ಇಂದು ಸಂಜೆ ಸಚಿವರೊಂದಿಗೆ ಪುಣೆಗೆ ಹೋಗಿ, ಅಗಲಿದ ಗಾಯಕ ಜೋಶಿ ಪಾರ್ಥಿವ ಶರೀರಕ್ಕೆ ಶ್ರದ್ಧಾಂಜಲಿ ಸಲ್ಲಿಸಲಿದ್ದಾರೆ.