ಶನಿವಾರವಷ್ಟೇ ತಲಾ 3 ಪ್ರಕರಣಗಳುಳ್ಳ 2 ಫಿರ್ಯಾದಿಗಳನ್ನು ದಾಖಲಿಸಿದ ಬಳಿಕ, ಮುಖ್ಯಮಂತ್ರಿ ಯಡಿಯೂರಪ್ಪ ವಿರುದ್ಧ ಇನ್ನೂ 9 ಪ್ರಕರಣಗಳುಳ್ಳ 3 ಮೊಕದ್ದಮೆಗಳು ಸೋಮವಾರ ಬೆಂಗಳೂರಿನ ವಿಶೇಷ ನ್ಯಾಯಾಲಯದಲ್ಲಿ ದಾಖಲಾಗಿವೆ.
ಈ ಮೂಲಕ ಒಟ್ಟು 5x3=15 ಕೇಸುಗಳನ್ನು ವಿಶೇಷ ನ್ಯಾಯಾಲಯದಲ್ಲಿ ವಕೀಲರಾದ ಸಿರಾಜಿನ್ ಬಾಷಾ ಮತ್ತು ಬಾಲರಾಜ್ ಅವರ ವಕೀಲ ಹನುಮಂತರಾಯ ದಾಖಲಿಸಿದ್ದಾರೆ.
ಇಂದು ದಾಖಲಿಸಿದ 3 ಮೊಕದ್ದಮೆಗಳ ವಿಚಾರಣೆಯನ್ನು ನ್ಯಾಯಾಧೀಶ ಹಿಪ್ಪರಗಿ ಅವರು ಫೆ.1, 2, 3ಕ್ಕೆ ನಿಗದಿಪಡಿಸಿದ್ದಾರೆ. ಶನಿವಾರ ದಾಖಲಿಸಿದ ಫೀರ್ಯಾದುಗಳ ವಿಚಾರಣೆ ಇಂದು ಸಂಜೆಯೇ ನಡೆಯುವ ಸಾಧ್ಯತೆಯನ್ನೂ ತಳ್ಳಿಹಾಕಲಾಗದು.
ಯಡಿಯೂರಪ್ಪ, ಪುತ್ರರಾದ ವಿಜಯೇಂದ್ರ ಮತ್ತು ರಾಘವೇಂದ್ರ, ಅಳಿಯ ಸೋಹನ್ ಕುಮಾರ್,ಮಾಲೂರು ಶಾಸಕ ಕೃಷ್ಣಯ್ಯ ಶೆಟ್ಟಿ, ಪ್ರವೀಣ್ ಚಂದ್ರ, ಅಶೋಕ್ ಕುಮಾರ್, ಭಾರತಿ ಶೆಟ್ಟಿ ಶಾಸಕಿ ಪ್ರಕಾಶ್ ಶೆಟ್ಟಿ ಹೇಮಚಂದ್ರ ಸಾಗರ, ಧವಳಗಿರಿ ಪ್ರಾಪ್ರಟೀಸ್, ಅಶೋಕ್ ಕುಮಾರ್, ಬಿ.ಆರ್.ಶೆಟ್ಟಿ, ನಮ್ರತಾ ಶಿಲ್ಪಿ, ಉಗೇಂದ್ರ-ಸಹ್ಯಾದ್ರಿ ಹೆಲ್ತ್ ಕೇರ್ ಮುಂತಾದ 28 ಮಂದಿ ಆರೋಪಿಗಳ ಪಟ್ಟಿಯಲ್ಲಿದ್ದಾರೆ.
ವಿಶ್ವಾಸದ್ರೋಹ, ಕ್ರಿಮಿನಲ್ ಒಳಸಂಚು ಮುಂತಾಗಿ, ದಾಖಲಾಗಿರುವ ಈ ಹದಿನೈದು ಪ್ರಕರಣಗಳಲ್ಲಿ, 189.71 ಕೋಟಿಯನ್ನು ಆರೋಪಿಗಳು ಒಟ್ಟಾಗಿ ಸ್ವಂತಕ್ಕೆ ಲಾಭ ಮಾಡಿಕೊಂಡಿದ್ದು, ಕರ್ನಾಟಕ ಸರಕಾರಕ್ಕೆ ಇದರಿಂದ 465.32 ಕೋಟಿ ನಷ್ಟವಾಗಿದೆ ಎಂದು ಅರ್ಜಿಯಲ್ಲಿ ದೂರಲಾಗಿದೆ.
ಈಗ ನ್ಯಾಯಾಲಯಕ್ಕೆ ಸಲ್ಲಿಸಿರುವ ದಾಖಲೆಗಳನ್ನು ಪರಿಶೀಲಿಸಿ, ಎಲ್ಲ ಫೀರ್ಯಾದುಗಳಿಗೆ ನಂಬರು ಅಸೈನ್ ಮಾಡಿದ ನಂತರ ನ್ಯಾಯಾಲಯವು, ಇವೆಲ್ಲವೂ ಕ್ರಮಬದ್ಧವಾಗಿದೆಯೇ ಎಂದು ತಿಳಿದುಕೊಂಡು ಅರ್ಜಿದಾರರ ವಾದವನ್ನು ಆಲಿಸುತ್ತದೆ. ಏನಾದರೂ ನ್ಯೂನತೆಗಳಿದ್ದರೆ ಮತ್ತು ಸಂದೇಹಗಳಿದ್ದರೆ ಅವುಗಳನ್ನು ಸರಿಪಡಿಸುವಂತೆ ಅರ್ಜಿದಾರರನ್ನು ಕೋರಿಕೊಳ್ಳಬಹುದು. ಆ ಬಳಿಕ ದೂರಿನ ಸತ್ಯಾಸತ್ಯತೆ ಪರಿಶೀಲನೆಯ ಬಳಿಕ ನ್ಯಾಯಾಲಯವು ಆರೋಪಿ ಸ್ಥಾನದಲ್ಲಿರುವವರೆಗೆ ನೋಟೀಸು ಜಾರಿ ಮಾಡಿ, ಹೇಳಿಕೆ ದಾಖಲಿಗೆ ಅವಕಾಶ ಕೊಡುತ್ತದೆ.
ಎರಡೂ ಕಡೆಯ ವಾದ ವಿವಾದ ಆಲಿಸಿದ ನಂತರ ಯಾವ ಮಟ್ಟದ ತನಿಖೆ ನಡೆಯಬೇಕು ಎಂದು ನ್ಯಾಯಾಲಯ ಸೂಚಿಸಲಿದೆ.